ವರದಿ : ಮಂದಾರ ರಾಜೇಶ್ ಭಟ್
ಮೂಡುಬಿದರೆ : ಕರಾವಳಿಯ ಪ್ರಾಚೀನ ಜಾನಪದ ಕ್ರೀಡೆಯಾದ ಕಂಬಳವು ಮೂಡುಬಿದರೆಯಲ್ಲಿ ಈ ಬಾರಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಕೇವಲ ಕೋಣಗಳ ವೇಗವನ್ನಷ್ಟೇ ಸಂಭ್ರಮಿಸದೆ, ಪ್ರಕೃತಿಯನ್ನು ಗೌರವಿಸುವ ಉದ್ದೇಶದೊಂದಿಗೆ ‘ಶೂನ್ಯ ತ್ಯಾಜ್ಯ’ (Zero Waste) ಅಭಿಯಾನವನ್ನು ಈ ಬಾರಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ.
ಕಳೆದ ಹಲವು ವರ್ಷಗಳಿಂದ ನಡೆಸಿಕೊಂಡು ಬಂದ ನಿರಂತರ ಪ್ರಯತ್ನಗಳು ಮತ್ತು ಯಶಸ್ಸು ಈ ಬಾರಿ 100% ಸಾಕಾರಗೊಳ್ಳುವ ಹಂತಕ್ಕೆ ತಲುಪಿವೆ.
ಈ ಮಹತ್ಕಾರ್ಯಕ್ಕೆ ಕಂಬಳ ಆಯೋಜಕರು , ಹಲವು ಸಂಘ ಸಂಸ್ಥೆಗಳು ಹಾಗೂ ಕೋಣಗಳ ಯಜಮಾನರು ಸಂಪೂರ್ಣ ಸಹಮತ ಸೂಚಿಸಿರುವುದು ಅಭಿಯಾನಕ್ಕೆ ಆನೆಬಲ ಬಂದಂತಾಗಿದೆ. ಕೇವಲ ಆಯೋಜಕರಷ್ಟೇ ಅಲ್ಲದೆ, ಕಂಬಳದ ಗದ್ದೆಯ ಸುತ್ತಮುತ್ತ ವ್ಯಾಪಾರ ನಡೆಸುವ ಅಂಗಡಿ ಮುಂಗಟ್ಟುಗಳ ಮಾಲೀಕರಲ್ಲಿಯೂ ತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಿಸಲು ವಿಶೇಷ ವಿನಂತಿ ಮಾಡಲಾಗಿದೆ.
ಸಂಘಟಿತ ಶಕ್ತಿ –
ಮೂಡುಬಿದರೆ ಪುರಸಭೆಯ ಪರಿಸರ ವಿಭಾಗ ಮತ್ತು ನಾಡಿನ ಹಲವಾರು ಶೂನ್ಯ ತ್ಯಾಜ್ಯ ಸ್ವಚ್ಛತಾ ರಾಯಭಾರಿಗಳು ಈ ಕಾರ್ಯದಲ್ಲಿ ಸ್ವಯಂಪ್ರೇರಿತರಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ಬಾರಿಯ ಕಂಬಳದಲ್ಲಿ ಕಂಡ ಯಶಸ್ಸು ಮತ್ತು ಜನರ ಸಹಕಾರವೇ ಈ ಬಾರಿಯೂ ಶೂನ್ಯ ತ್ಯಾಜ್ಯದ ಗುರಿ ತಲುಪಲು ಮುಖ್ಯ ಪ್ರೇರಣೆಯಾಗಿದೆ. ನೂರಾರು ಸ್ವಯಂಸೇವಕರು ಕಾರ್ಯಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಪ್ರತಿ ಹಂತದಲ್ಲೂ ಪರಿಸರ ಜಾಗೃತಿ ಮೂಡಿಸುತ್ತಿದ್ದಾರೆ.
ಸಂಸ್ಕೃತಿ ಮತ್ತು ಪರಿಸರದ ಸಮ್ಮಿಲನ
ನಮ್ಮ ಕಲೆ ಮತ್ತು ಸಂಸ್ಕೃತಿಗಳು ಕೇವಲ ಭೂತಕಾಲದ ನೆನಪುಗಳಲ್ಲ, ಅವು ಭವಿಷ್ಯಕ್ಕೆ ನಾವು ನೀಡುವ ಉತ್ತಮ ಪರಿಸರದ ಅಡಿಪಾಯವೂ ಆಗಿರಬೇಕು. ಕೆಸರುಗದ್ದೆಯ ಈ ಜಾನಪದ ಸಂಭ್ರಮವು ಪ್ರಕೃತಿಯ ಒಡಲಲ್ಲೇ ನಡೆಯುವುದರಿಂದ, ಆ ಪ್ರಕೃತಿಯನ್ನು ಮಲಿನಗೊಳಿಸದೆ ಗೌರವಿಸುವುದು ಪ್ರತಿಯೊಬ್ಬ ಕಂಬಳ ಪ್ರೇಮಿಯ ಧರ್ಮವಾಗಿದೆ. ಶೂನ್ಯ ತ್ಯಾಜ್ಯದ ಈ ಕಿರು ಹೆಜ್ಜೆ, ನಾಳೆಯ ಹಸಿರುಮಯ ಸಮಾಜಕ್ಕೆ ದೊಡ್ಡ ಪ್ರೇರಣೆಯಾಗಲಿ.

