ಮಾರುಕಟ್ಟೆ ಡಿಜಿಟಲೀಕರಣದಲ್ಲಿ ಮಹತ್ವದ ಮೈಲುಗಲ್ಲು
ಬೆಂಗಳೂರು, ಫೆಬ್ರವರಿ 6, 2026 : ಕೋಟಕ್ ಮಹೀಂದ್ರ ಬ್ಯಾಂಕ್ (Kotak) ಭಾರತೀಯ ಹಣಕಾಸು ಮಾರುಕಟ್ಟೆಯಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದು, ಎಲೆಕ್ಟ್ರಾನಿಕ್ ಸಹಿಗಳ (Electronic Signatures) ಮೂಲಕವೇ ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರು (FPI) ನೋಂದಣಿ ಹಾಗೂ ಖಾತೆ ತೆರೆಯುವ ಸಂಪೂರ್ಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಭಾರತದ ಮೊದಲ ಕಸ್ಟೋಡಿಯನ್ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ನವೀನ ವ್ಯವಸ್ಥೆಯಡಿ ಕೋಟಕ್ ಈಗಾಗಲೇ ಡಿಜಿಟಲ್ ಸಹಿಗಳ ಆಧಾರದಲ್ಲಿ ಮೊದಲ ಎರಡು FPI ಪರವಾನಗಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ. ಈ ಕ್ರಮವು SEBI ಯ ಡಿಜಿಟಲ್ ಪರಿವರ್ತನಾ ಕಾರ್ಯಸೂಚಿಗೆ ಸಂಪೂರ್ಣವಾಗಿ ಹೊಂದಿಕೆಯಾಗಿದ್ದು, ಭಾರತದ ಬಂಡವಾಳ ಮಾರುಕಟ್ಟೆಯನ್ನು ಕಾಗದರಹಿತ (paperless) ಮತ್ತು ಹೂಡಿಕೆದಾರ ಸ್ನೇಹಿಯಾಗಿ ರೂಪಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಈ ಡಿಜಿಟಲ್-ಫಸ್ಟ್ ಕಸ್ಟಡಿ ಮತ್ತು ಆನ್‌ಬೋರ್ಡಿಂಗ್ ವ್ಯವಸ್ಥೆಯು ಜಾಗತಿಕ ಹೂಡಿಕೆದಾರರಿಗೆ ವ್ಯಾಪಾರ ನಡೆಸುವ ಸುಲಭತೆ, ಕೈಯಿಂದ ಸಹಿ ಮಾಡುವ ಪ್ರಕ್ರಿಯೆ ನಿವಾರಣೆಯ ಮೂಲಕ ಕಾರ್ಯಾಚರಣಾ ಅಪಾಯ ಕಡಿತ, ವೇಗವಾದ ಮತ್ತು ಸುಗಮ ಹೂಡಿಕೆ ಅನುಭವವನ್ನು ಒದಗಿಸಲಿದೆ. ಇದರಿಂದ ಭಾರತವು ಜಾಗತಿಕ ಮಟ್ಟದಲ್ಲಿ ಡಿಜಿಟಲೀಕೃತ ಮತ್ತು ಹೂಡಿಕೆ ಸ್ನೇಹಿ ಮಾರುಕಟ್ಟೆ ಎಂಬ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ.
ಈ ಕುರಿತು ಮಾತನಾಡಿದ ಕೋಟಕ್ ಮಹೀಂದ್ರ ಬ್ಯಾಂಕ್‌ನ ಬ್ಯಾಂಕಿಂಗ್ ಮತ್ತು ಫೈನಾನ್ಶಿಯಲ್ ಇನ್‌ಸ್ಟಿಟ್ಯೂಷನ್ಸ್ ಗ್ರೂಪ್‌ನ ಅಧ್ಯಕ್ಷರಾದ ಸಚಿನ್ ಸಮಂತ್, ಜಾಗತಿಕ ಹೂಡಿಕೆದಾರರಿಗೆ ಸಂಪೂರ್ಣ ಡಿಜಿಟಲ್ ಮತ್ತು ಅಡೆತಡೆಯಿಲ್ಲದ ಅನುಭವ ನೀಡುವ ನಮ್ಮ ಬದ್ಧತೆಯ ಪ್ರತಿಬಿಂಬವೇ ಈ ಸಾಧನೆ. ಡಿಜಿಟಲ್ ಸಹಿಗಳ ಮೂಲಕ FPI ನೋಂದಣಿ ಮತ್ತು ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ಜಾರಿಗೆ ತಂದ ಮೊದಲ ಕಸ್ಟೋಡಿಯನ್ ಆಗಿರುವುದು, SEBI ಯ ಪ್ರಗತಿಪರ ಸುಧಾರಣೆಗಳಿಗೆ ಅನುಗುಣವಾಗಿ ಭಾರತದ ಬಂಡವಾಳ ಮಾರುಕಟ್ಟೆಯನ್ನು ಆಧುನಿಕ ಹಾಗೂ ಕಾಗದರಹಿತ ವ್ಯವಸ್ಥೆಯತ್ತ ಕರೆದೊಯ್ಯಲಿದೆ” ಎಂದರು.
ಉಲ್ಲೇಖನೀಯವಾಗಿ, ಜನವರಿ 2026ರಲ್ಲಿ SEBI, ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆದಾರರಿಗಾಗಿ ಕಾಮನ್ ಅಪ್ಲಿಕೇಶನ್ ಫಾರ್ಮ್ (CAF) ಪೋರ್ಟಲ್ ಮೂಲಕ ಡಿಜಿಟಲ್ ಸಿಗ್ನೇಚರ್ ಸೆರ್ಟಿಫಿಕೇಟ್ (DSC) ಹಾಗೂ ಎಲೆಕ್ಟ್ರಾನಿಕ್ ಸಹಿಗಳನ್ನು ನೀಡುವ ಏಕೀಕೃತ ಕಾರ್ಯವಿಧಾನವನ್ನು ಜಾರಿಗೆ ತಂದಿದೆ.
SEBI ಯ ಪತ್ರಿಕಾ ಪ್ರಕಟಣೆ (PR No. 03/2026) ಪ್ರಕಾರ, ಡಿಜಿಟಲ್ ಸಹಿಗಳು ಮಾಹಿತಿ ತಂತ್ರಜ್ಞಾನ ಕಾಯ್ದೆ, 2000ಕ್ಕೆ ಅನುಗುಣವಾಗಿರುವ ಭಾರತೀಯ ಪ್ರಮಾಣೀಕರಣ ಸಂಸ್ಥೆಗಳ ಮೂಲಕವೇ ನೀಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.

