ಹೋಟೆಲ್ ಕಾರ್ಮಿಕರ ಹಿತರಕ್ಷಣೆಗಾಗಿ ಬೀದಿಗಿಳಿಯಲು ಕರವೇ ಸನ್ನದ್ಧ : ಅ. ರಾ. ಪ್ರಭಾಕರ್ ರಾಜ್ ಪೂಜಾರಿ

0
22

ಉಡುಪಿ : ಉಡುಪಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಹೋಟೆಲ್ ಕಾರ್ಮಿಕರು ಹಗಲಿರುಳು ದುಡಿಯುತ್ತಿದ್ದಾರೆ. ಆದರೆ, ದುರಂತವೆಂದರೆ ಬಹುತೇಕ ಹೋಟೆಲ್‌ಗಳಲ್ಲಿ ಕಾರ್ಮಿಕರಿಗೆ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಶೋಷಣೆಗೆ ಒಳಗಾಗುತ್ತಿದ್ದಾರೆ. ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡು ಕಾರ್ಮಿಕರಿಗೆ ನ್ಯಾಯಯುತ ಸೌಲಭ್ಯ ಒದಗಿಸಬೇಕು, ಇಲ್ಲವಾದಲ್ಲಿ ಹೋಟೆಲ್ ಕಾರ್ಮಿಕರ ಜೊತೆಗೂಡಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಅಧ್ಯಕ್ಷರಾದ ಅ. ರಾ. ಪ್ರಭಾಕರ್ ರಾಜ್ ಪೂಜಾರಿ ಹೇಳಿದ್ದಾರೆ.

ಜಿಲ್ಲೆಯಾದ್ಯಂತ ಹೋಟೆಲ್ ಉದ್ದಿಮೆ ಬೆಳೆಯುತ್ತಿದ್ದರೂ, ಅಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಿಯಾದ ವಿಶ್ರಾಂತಿ ಗೃಹ, ಆರೋಗ್ಯ ವಿಮೆ ಅಥವಾ ಕನಿಷ್ಠ ವೇತನದಂತಹ ಸೌಲಭ್ಯಗಳು ಸಿಗುತ್ತಿಲ್ಲ. ಶ್ರಮಿಕ ವರ್ಗದ ಬೆವರಿನಿಂದ ಹೋಟೆಲ್ ಉದ್ಯಮ ಲಾಭ ಗಳಿಸುತ್ತಿದೆ. ಆದರೆ ಸರ್ಕಾರ ಕಾರ್ಮಿಕರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ವಿಫಲವಾಗಿದೆ. ಹಲವು ಹೋಟೆಲ್‌ಗಳಲ್ಲಿ ಕೆಲಸದ ಅವಧಿ ನಿಗದಿಯಾಗಿಲ್ಲ ಮತ್ತು ಪೂರಕ ಭತ್ಯೆಗಳೂ ಇಲ್ಲದೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ.

“ಹೋಟೆಲ್ ಕಾರ್ಮಿಕರು ಸಮಾಜದ ಅವಿಭಾಜ್ಯ ಅಂಗ. ಅವರಿಗೆ ಗೌರವಯುತ ಬದುಕು ಮತ್ತು ಕನಿಷ್ಠ ಸೌಲಭ್ಯ ನೀಡುವುದು ಸರ್ಕಾರದ ಕರ್ತವ್ಯ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಹೋಟೆಲ್ ಕಾರ್ಮಿಕ ಮಿತ್ರರನ್ನು ಸಂಘಟಿಸಿ, ಅವರ ನ್ಯಾಯಯುತ ಹಕ್ಕುಗಳಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಹೋರಾಟಕ್ಕೆ ಸಿದ್ಧವಿದೆ ಎಂದು ಕರವೇ ನಾರಾಯಣ ಗೌಡ ಬಣದ ಉಡುಪಿ ಜಿಲ್ಲಾಧ್ಯಕ್ಷ ಅ. ರಾ. ಪ್ರಭಾಕರ್ ರಾಜ್ ಪೂಜಾರಿ ಹೇಳಿದರು.

ಕಾರ್ಮಿಕ ಇಲಾಖೆ ತಕ್ಷಣವೇ ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಕಾರ್ಮಿಕರ ಹಿತಾಸಕ್ತಿಯನ್ನು ಕಡೆಗಣಿಸಿದರೆ ಕರ್ನಾಟಕ ರಕ್ಷಣಾ ವೇದಿಕೆಯು ಕಾರ್ಮಿಕರ ಪರವಾಗಿ ಬೀದಿಗಿಳಿದು ಪ್ರತಿಭಟಿಸಲಿದೆ ಎಂದು ಎಚ್ಚರಿಕೆ ನೀಡಿದರು.

LEAVE A REPLY

Please enter your comment!
Please enter your name here