ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ತಂಗಿ ಗಂಡ (ಬಾವ) ನಟ ಆಯುಷ್ ಶರ್ಮಾ ಅವರಿಗೆ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಟ ರಣವೀರ್ ಸಿಂಗ್ ಅವರಿಗೆ ವ್ಯಾಟ್ಸ್‌ಆಯಪ್ ಮೂಲಕ ಬೆದರಿಕೆ ಬಂದ ಒಂದು ದಿನದ ಬಳಿಕ ಆಯುಷ್ ಶರ್ಮಾಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ಆಯುಷ್‌ಗೆ ಬೆದರಿಕೆ ಸಂದೇಶ ಕಳುಹಿಸಿದವರು ನಟ ಹಾಗೂ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯರೆಂದು ಹೇಳಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲದಿದ್ದರೂ, ಇ-ಮೇಲ್ ನಿಜವಾದದ್ದೇ ಅಥವಾ ಯಾರಾದರೂ ಕಿಡಿಗೇಡಿತನ ಮಾಡಿದ್ದಾರೆಯೇ ಎಂದು ಅಪರಾಧ ವಿಭಾಗದ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆ.1ರಂದು ಮುಂಬೈನ ಜುಹು ಪ್ರದೇಶದಲ್ಲಿರುವ ನಿರ್ದೇಶಕ ಹಾಗೂ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ಶೂಟರ್‌ಗಳು ಐದು ಸುತ್ತು ಗುಂಡು ಹಾರಿಸಿದ್ದರು. ಘಟನೆ ಸಂಬಂಧ ಆರೋಪಿಗಳ ವಿರುದ್ಧ ಮುಂಬೈ ಪೊಲೀಸರು, ಮಹಾರಾಷ್ಟ್ರ ಸಂಘಟಿತ ಅಪರಾಧ ಕೃತ್ಯಗಳ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

