ಮಣಿಪಾಲ : ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಮಣಿಪಾಲ ಪೊಲೀಸರು ಸಿಂಡಿಕೇಟ್ ಸರ್ಕಲ್ ಬಳಿ ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಕೇರಳದ ಮೊಹಮ್ಮದ್ ಅಜ್ಮಲ್ (26) ಎಂದು ಗುರುತಿಸಲಾಗಿದ್ದು, ಈತನಿಂದ 1 ಲಕ್ಷ ಮೌಲ್ಯದ 2084 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಈತ ಗಾಂಜಾ ಸರಬರಾಜು ಮಾಡಿದ 5 ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರು ಗಾಂಜಾ ಸೇವಿಸಿದ ಬಗ್ಗೆ ದೃಢಪಟ್ಟಿದ್ದು, ಐದು ಮಂದಿರ ವಿರುದ್ಧವೂ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಳೆದ ವರ್ಷ ಆಗಸ್ಟ್‌ನಲ್ಲಿಈಶ್ವರನಗರದ ಬಳಿಯ ಅಪಾರ್ಟ್‌ಮೆಂಟ್‌ವೊಂದಕ್ಕೆ ದಾಳಿ ನಡೆಸಲಾಗಿತ್ತು. ಈ ವೇಳೆ ಆಪ್ಶಿನ್ ಮತ್ತು ಶಿವನಿಧಿ ಆಚಾರ್ಯ ಅವರು ಮಾದಕ ವಸ್ತುಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ವಿಚಾರ ತಿಳಿದುಬಂದಿದೆ. ಅವರಿಂದ ಸುಮಾರು 50 ಸಾವಿರ ರೂ.ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿತ್ತು.
ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಕಾಸರಗೋಡಿನ ಮನೀಶ್ ನನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಮೇರೆಗೆ ಈಗ ಮೊಹಮ್ಮದ್ ಅಜ್ಮಲ್ ಬಂಧನವಾಗಿದೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

