ಬ್ಯಾಂಕ್ ಲಾಕರ್‌ನಿಂದ 4 ಕೋಟಿ ಮೌಲ್ಯದ ಚಿನ್ನ ದೋಚಿಕೆ : ಅಸಿಸ್ಟೆಂಟ್ ಮ್ಯಾನೇಜರ್ ಅರೆಸ್ಟ್

0
41

ಬೆಂಗಳೂರು: ನಂಬಿಕೆಯೇ ಅಡಿಪಾಯವಾಗಿರಬೇಕಾದ ಬ್ಯಾಂಕ್‌ನಲ್ಲೇ ಆತ ಅಸಿಸ್ಟೆಂಟ್ ಮ್ಯಾನೇಜರ್ ಆಗಿದ್ದ. ಆದರೆ, ಆನ್‌ಲೈನ್ ಜೂಜಾಟದ ಚಟಕ್ಕೆ ಬಿದ್ದ ಈತ ಬ್ಯಾಂಕ್‌ನಲ್ಲಿ ಗ್ರಾಹಕರು ಅಡಮಾನವಿಟ್ಟಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನವನ್ನೇ ಗುಳುಂ ಮಾಡಿದ್ದಾನೆ. ಇಂಡಿಯನ್ ಬ್ಯಾಂಕ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಕಿರಣ್ ಎಂಬಾತನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬೆಂಗಳೂರು ಗಿರಿನಗರದ ಇಂಡಿಯನ್ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಿರಣ್ ಕಳೆದ ಹಲವು ತಿಂಗಳಿನಿಂದ ಈ ಕೃತ್ಯ ಎಸಗುತ್ತಾ ಬಂದಿದ್ದಾನೆ. ಸಾರ್ವಜನಿಕರು ತುರ್ತು ಅಗತ್ಯಗಳಿಗಾಗಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟಿದ್ದ ಚಿನ್ನಾಭರಣಗಳನ್ನು ಈತ ಯಾರಿಗೂ ತಿಳಿಯದಂತೆ ಕದ್ದಿದ್ದಾನೆ. ಒಟ್ಟು 4,12,65,000 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಿರಣ್ ಕಳವು ಮಾಡಿದ್ದಾನೆ.

ಬ್ಯಾಂಕ್ ಮ್ಯಾನೇಜರ್ ಅವರು ಲಾಕರ್‌ನಲ್ಲಿರುವ ಚಿನ್ನಾಭರಣಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸುವಾಗ ಚಿನ್ನ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬ್ಯಾಂಕ್ ವತಿಯಿಂದ ಆಂತರಿಕ ತನಿಖೆ ಮತ್ತು ಪೊಲೀಸ್ ವಿಚಾರಣೆ ನಡೆಸಿದಾಗ ಕಿರಣ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಕಿರಣ್‌ನನ್ನು ಅರೆಸ್ಟ್ ಮಾಡಿದ್ದು, ಆತನಿಂದ ಸದ್ಯಕ್ಕೆ 700 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇನ್ನುಳಿದ ಚಿನ್ನ ಎಲ್ಲಿಗೆ ಹೋಯಿತು? ಯಾರಿಗೆ ಮಾರಾಟ ಮಾಡಿದ್ದಾನೆ? ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

LEAVE A REPLY

Please enter your comment!
Please enter your name here