ರಾ.ಹೆ. ಭೂ ಸ್ವಾಧಿನ ಪ್ರಕ್ರಿಯೆ ತ್ವರಿತಗೊಳಿಸಲು ಸೂಚನೆ

0
32

ಉಡುಪಿ: ಕಾರ್ಕಳದಲ್ಲಿ ಹಾದುಹೋಗುವ 169 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂ ಸ್ವಾಧಿನ ಪ್ರಕ್ರಿಯೆ ತ್ವರಿತವಾಗಿ ಪೂರ್ಣಗೊಳಿಸಬೇಕು. ವೈಜ್ಞಾನಿಕವಾಗಿ ಮೌಲ್ಯ ನಿಗದಿಪಡಿಸಿ ಭೂ ಮಾಲೀಕರಿಗೆ ನೀಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಾರ್ಕಳ, ಬಜಗೋಳಿ, ಮಾಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿ ಮತ್ತು ಭೂ ಸ್ವಾಧಿನ ಪರಿಹಾರ ಪಾವತಿ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಲ್ಪೆ ಮತ್ತು ಕರಾವಳಿ ಜಂಕ್ಷನ್​ ವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ಭೂ ಸ್ವಾಧಿನ ಗೊಳಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು ಎಂದರು.

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಭೂ ಸ್ವಾಧಿನ ಪ್ರಕ್ರಿಯೆಯಲ್ಲಿ ಒಳಪಡುವ ಮನೆ, ಕೃಷಿ ಜಮೀನು ಸೇರಿದಂತೆ ಮತ್ತಿತರ ಸ್ವತ್ತುಗಳನ್ನು ಅಧಿಕಾರಿಗಳು ನಿಖರವಾಗಿ ಪರಿವೀಕ್ಷಣೆ ಮಾಡಿ, ನೈಜತೆಗೆ ಅನುಗುಣವಾಗಿ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕೆ ನಿಗದಿಪಡಿಸಲು ಸೂಚನೆ ನೀಡಿದರು.

ಶಾಸಕ ಸುನಿಲ್​ ಕುಮಾರ್​ ಮಾತನಾಡಿ, ಭೂ ಸ್ವಾಧಿನಕ್ಕೆ ಒಳಪಡುವ ಮನೆ ಅಥವಾ ಭೂಮಿಯ ಮಾಲೀಕರಿಗೆ ಗರಿಷ್ಠ ಪ್ರಮಾಣದ ಪರಿಹಾರದ ಹಣವನ್ನು ಒದಗಿಸಬೇಕು. ನೆರೆಯ ಜಿಲ್ಲೆಯಲ್ಲಿ ಭೂ ಸ್ವಾಧಿನ ಪ್ರಕ್ರಿಯೆಗೆ ನೀಡಿರುವ ಪರಿಹಾರದ ಹಣವು ಹೆಚ್ಚು ಇದೆ. ಒಂದೇ ರಸ್ತೆಗೆ ಭೂ ಸ್ವಾಧಿನ ಪರಿಹಾರದ ಹಣ ವ್ಯತ್ಯಾಸದಿಂದ ಭೂ ಮಾಲೀಕರಲ್ಲಿ ಗೊಂದಲದ ವಾತಾವರಣ ಉಂಟಾಗಿದೆ. ಅಧಿಕಾರಿಗಳು ಕಾನೂನಿನ ಅನ್ವಯ ಪರಿಹಾರದ ಮೊತ್ತವನ್ನು ನಿಗದಿಗೊಳಿಸಬೇಕು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ಡಿ.ಎಫ್​.ಓ ರುಥ್ರೇನ್​ ಪಿ., ಹೆಚ್ಚುವರಿ ಪೊಲೀಸ್​ ವರಿಷ್ಠಾಧಿಕಾರಿ ಸುಧಾಕರ್​ ನಾಯಕ್​, ಸಹಾಯಕ ಕಮೀಷನರ್​ ರಶ್ಮಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here