ಉಡುಪಿ : ಭಾರತೀಯ ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿಯನ್ನು ವಿದೇಶಕ್ಕೆ ರವಾನಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಲ್ಪೆ ಪೊಲೀಸರು ಕಾರ್ಯಾಚರಣೆ ನಡೆಸಿ ಐದನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಬರಗಾರಿಯ ಗ್ರಾಮದ ನಿವಾಸಿ ಆಲಿಫ್ ಇಸ್ಲಾಮ್ (21) ಬಂಧಿತ ಆರೋಪಿ. ಈತ ಪ್ರಸ್ತುತ ಕೇರಳದ ಇಡುಕಿ ಜಿಲ್ಲೆಯ ಮುನ್ನಾರ್‌ನ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದ ಎನ್ನಲಾಗಿದೆ. ಫೆಬ್ರವರಿ 16ರಂದು ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತ ಆರೋಪಿ ಆಲಿಫ್ ಇಸ್ಲಾಮ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಧೀಶರು ಫೆಬ್ರವರಿ 21ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ. ಬಂಧಿತ ಆರೋಪಿ ಬಾಂಗ್ಲಾದೇಶದ ಪ್ರಜೆ ಎಂಬ ಶಂಕೆ ವ್ಯಕ್ತವಾಗಿದ್ದು ಈ ನಿಟ್ಟಿನಲ್ಲಿಯೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ : ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೊಚಿನ್ ಶಿಪ್ ಯಾರ್ಡ್ ಹೊರಗುತ್ತಿಗೆ ನೌಕರ ಸೇರಿದಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ನೌಕಾಪಡೆಯ ಯುದ್ಧನೌಕೆಗಳು ಹಾಗೂ ಅವುಗಳ ಚಲನವಲನದ ರಹಸ್ಯ ಮಾಹಿತಿ ದೇಶವಿರೋಧಿ ಸಂಘಟನೆಗಳಿಗೆ ರವಾನಿಸುತ್ತಿದ್ದರು ಎನ್ನಲಾಗಿದೆ. ಈ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಮಲ್ಪೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾದ್ದರಿಂದ ಕೇಂದ್ರ ತನಿಖಾ ಸಂಸ್ಥೆಗಳೂ ಈ ಬಗ್ಗೆ ನಿಗಾ ವಹಿಸಿವೆ ಎಂದು ತಿಳಿದುಬಂದಿದೆ.

