ಕಾಸರಗೋಡು: ಡಾ ವಾಮನ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಅವರ ಮುಂದಾಳುತ್ವದಲ್ಲಿ ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಈ ಭಾನುವಾರ 22 ಫೆಬ್ರವರಿ 2026 ರಂದು ಕಾಸರಗೋಡು ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಆಯೋಜಿತವಾಗಿದೆ.
ಇಂತಹ ಸಮ್ಮೇಳನ ಕ್ಷೀಣಿಸುತ್ತಿರುವ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಮಾಡುವ ನಿರಂತರ ಪ್ರಯತ್ನಗಳಲ್ಲಿ ಒಂದು. ಇಲ್ಲಿನ ಕನ್ನಡಿಗರ ಮಾತೃಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನಗಳ ದ್ಯೋತಕಗಳು. ಸಂಘ-ಸಂಸ್ಥೆಗಳು ಕನ್ನಡದ ಉಳಿವಿಗಾಗಿ ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಲೇ ಬಂದಿವೆ. ಅವುಗಳಲ್ಲಿ ಕನ್ನಡ ಭವನ ಮತ್ತು ಅಂಗ ಸಂಸ್ಥೆಗಳು ಅನವರತ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿವೆ. ಈಗ ಉದ್ದೇಶಿಸಿರುವ ಈ ಕಾರ್ಯಕ್ರಮವು ಅವುಗಳಲ್ಲಿ ಒಂದು.
ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಭಾನುವಾರ, ಫೆಬ್ರವರಿ 22ರಂದು ಬೆಳಿಗ್ಗೆ 7:00 ಯಿಂದ ರಾತ್ರಿ 10 ಗಂಟೆಯವರೆಗೆ ದಿನಪೂರ್ತಿ ನಡೆಯುವುದಾಗಿ ರೂವಾರಿಗಳಾದ ಡಾ ವಾಮನರಾವ್ ಬೇಕಲ್ ತಿಳಿಸಿದ್ದಾರೆ. ಕಾರ್ಯಕ್ರಮವು ನುಳ್ಳಿಪಾಡಿಯ ಕನ್ನಡ ಭವನದ ಪ್ರಾಂಗಣದಲ್ಲಿ ಸುಸಜ್ಜಿತಗೊಂಡ ‘ಚುಟುಕು ಯೋಗಾಚಾರ್ಯ ಡಾ ಎಂ ಜಿ ಆರ್ ಅರಸ್ ವೇದಿಕೆ’ಯಲ್ಲಿ ನಡೆಯಲಿದೆ. ಕನ್ನಡ ಭವನ ಕೇಂದ್ರ ಸಮಿತಿಯ ಪ್ರಾಯೋಗಿಕತ್ವದಲ್ಲಿ ಒಂದು ಮಹತ್ವದ ಕಾರ್ಯಕ್ರಮವಾಗಿ ಇದನ್ನು ಆಯೋಜಿಸಲಾಗಿದೆ. ಕಾಸರಗೋಡಿನ ಕನ್ನಡಿಗರನ್ನು ಒಟ್ಟುಗೂಡಿಸಲು ಇದೊಂದು ಸುವರ್ಣ ಅವಕಾಶವೂ ಹೌದು. ವೈವಿಧ್ಯಮಯ ಕಾರ್ಯಕ್ರಮಗಳನ್ನು ಹೊಂದಿರುವ ಈ ಸಮ್ಮೇಳನದಲ್ಲಿ ಬೆಳಿಗ್ಗೆ 7:00 ಯಿಂದ ಭಜನಾ ಕಾರ್ಯಕ್ರಮವಿರುತ್ತದೆ.
ಕಾರ್ಯಕ್ರಮದ ಅಂಗವಾಗಿ ಗಡಿನಾಡು ಪ್ರದೇಶದ ಶಕ್ತಿ ಕೇಂದ್ರ ವಾದ ಶ್ರೀಮದೆಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ಮತ್ತು ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಆಧ್ಯಾತ್ಮಿಕ ನೇತೃತ್ವ ನೀಡಲಿದ್ದಾರೆ.
ಕಾಸರಗೋಡು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಜಯಪ್ರಕಾಶ್ ತೊಟ್ಟೆತ್ತೋಡಿ ಯವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ ಕೆ ಎನ್ ವೆಂಕಟರಮಣ ಹೊಳ್ಳ ಮತ್ತು ರಾಜೇಶ್ ಕೋಟೆಕಣಿ ಸ್ವಾಗತ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ಡಾ ಕೃಷ್ಣ ಪ್ರಸಾದ್ ಕೂಡ್ಲು, ಅತಿಥಿಗಳ ಸ್ವಾಗತವನ್ನು ಡಾ ವಾಮನ ರಾವ್ ಬೇಕಲ್, ಪ್ರಸ್ತಾವನೆಯನ್ನು ಶ್ರೀ ಪ್ರದೀಪ್ ಬೇಕಲ್, ದೀಪ ಪ್ರಜ್ವಲನೆಯನ್ನು ಡಾ ಕೆ ಎನ್ ವೆಂಕಟರಮಣ ಹೊಳ್ಳ ಮತ್ತು ಉದ್ಘಾಟನೆಯನ್ನು ಡಾ ಗೋವಿಂದ ಭಟ್ ಅವರು ನಡೆಸಿಕೊಡಲಿದ್ದಾರೆ.
ರಾಷ್ಟ್ರಧ್ವಜಾರೋಹಣವನ್ನು ಶ್ರೀ ಪ್ರದೀಪ್ ಕುಮಾರ್ ಕಲ್ಕೂರ ಅವರು ಮತ್ತು ಕನ್ನಡ ಧ್ವಜಾರೋಹಣವನ್ನು ವಿಜಿ ಕುಮಾರ್ ಅವರು ಮತ್ತು ಕನ್ನಡ ಭುವನೇಶ್ವರಿ ಭಾವಚಿತ್ರಕ್ಕೆ ಹಾರಾರ್ಪಣೆಯನ್ನು ಸುರೇಶ್ ನೆಗಳಗುಳಿ ಅವರು ನಡೆಸಿಕೊಡುವರು. ಆಶೀರ್ವಚನವನ್ನು ಶ್ರೀ ಶ್ರೀ ಸತ್ಯಾನಂದ ಭಾರತಿ ಶ್ರೀ ಪಾದಂಗಳವರು ಮತ್ತು ಲಕ್ಷ್ಮೇಶ್ವರದ ಪರಮಪೂಜ್ಯ ಶ್ರೀ ಶ್ರೀ ರಮೇಶ ಮಹಾಸ್ವಾಮಿಗಳು ಮಾಡಿ ಹರಸಲಿದ್ದಾರೆ. ಚಕ್ರವರ್ತಿ ಶ್ರೀ ಕೃಷ್ಣ ದೇವರಾಯರ ಭಾವಚಿತ್ರಕ್ಕೆ ಹಾರಾ ರ್ರ್ಪಣೆಯನ್ನು ಡಾ ಕೆ ಜಿ ವೆಂಕಟೇಶ್ ಶಿವಮೊಗ್ಗ ಅವರು ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ ಭಾವಚಿತ್ರಕ್ಕೆ ಹಾರಾರ್ಪಣೆಯನ್ನು ಡಾ ಬಾಲಕೃಷ್ಣ ಎಸ್ ಮುದ್ದೋಡಿ ಅವರು ಮಾಡಲಿದ್ದಾರೆ. ಗಣ್ಯರು ಉಪಸ್ಥಿತರಿರುತ್ತಾರೆ. ಶ್ರೀ ವಿರಾಜ್ ಅಡೂರು ನಿರ್ವಹಿಸಿ ಶ್ರೀಮತಿ ಸಂಧ್ಯಾ ರಾಣಿ ಟೀಚರ್ ವಂದನಾರ್ಪಣೆ ಮಾಡುವರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ. ಸಂಗಮೇಶ್ ತಮ್ಮನ ಗೌಡ್ರ ಲಕ್ಷ್ಮೇಶ್ವರ ಅವರ “ಶಿಕ್ಷಕ ವೃತ್ತಿಯಲ್ಲಿ ನನ್ನ 20 ವರ್ಷಗಳು” ಮತ್ತು ದೀಕ್ಷಾ ಕಾಪಿಕಾಡು ಅವರ ಕವನ ಸಂಕಲನ ‘ಭಾವ ಗಂಗೆಯಲಿ ತೇಲಿ’ ಕೃತಿಗಳು ಲೋಕಾರ್ಪಣಗೊಳ್ಳಲಿವೆ.
ಕಾರ್ಯಕ್ರಮದ ಮುಖ್ಯ ಅಂಗವಾಗಿರುವ ರಾಷ್ಟ್ರೀಯ ಪ್ರಶಸ್ತಿ 2026ರ ಕವಿ ಕಾವ್ಯ ವಿಭೂಷಣ ಪ್ರಶಸ್ತಿ ಪ್ರದಾನದಲ್ಲಿ 16 ಸಾಧಕರ ನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕವಿ ಕಾವ್ಯ ಕನ್ನಡ ಸಮಾಜ ಸೇವಾರತ್ನ ರಾಷ್ಟ್ರೀಯ ಪ್ರಶಸ್ತಿ 2026 ಇದಕ್ಕೆ ಇಬ್ಬರು ಸಾಧಕರು ಭಾಜನರಾಗಲಿರುವರು.
ನಾಡೋಜ ಡಾ ಕೈಯ್ಯಾರ ರಾಷ್ಟ್ರೀಯ ಪ್ರಶಸ್ತಿ 2026ನ್ನು ಕಾದಂಬರಿಕಾರ ಮತ್ತು ಸಂಘಟಕ ಶ್ರೀ ಪ್ರದೀಪ್ ಕುಮಾರ್ ಅವರು ಸ್ವೀಕರಿಸುವರು.
ಕನ್ನಡ ವರ್ಧನೆಯ ಪ್ರಯತ್ನವಾಗಿ ಕನ್ನಡ ಹೋರಾಟಗಾರರಾದ ಕನ್ನಡದ ಶಕ್ತಿ ಶ್ರೀ ಬೇವಿನ್ಜೆ ಶ್ರೀಧರ ಕಕ್ಕಿಲ್ಲಾಯ ಮತ್ತು ಸರೋಜಿನಿ ದೇವಿ ಕಕ್ಕಿಲ್ಲಾಯ ಸ್ಮರಣಾರ್ಥವಾಗಿ ಸಾರ್ವಜನಿಕ ಉಚಿತ ವಾಚನಾಲಯ ಕೂಡ ಲೋಕಾರ್ಪಣೆಗೊಳ್ಳಲಿದೆ.
ಪ್ರಶಸ್ತಿ ಪ್ರದಾನದ ಮುಂದುವರಿದ ಭಾಗವಾಗಿ ಅಂತರ್ರಾಜ್ಯ ಪ್ರಶಸ್ತಿಯಾದ ಕನ್ನಡ ಪಯಸ್ವಿನಿ ಅಚೀವ್ಮೆಂಟ್ ಅವಾರ್ಡ್ 2026, 21 ಸಾಧಕರಿಗೆ ಪ್ರಧಾನವಾಗಲಿದೆ. ಜೊತೆಗೆ ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಗೌರವ ಸನ್ಮಾನವಾಗಿ ಪರಿಷತ್ತಿನ ಆಯೋಜನೆಯಲ್ಲಿ ಸಹಕರಿಸಿದ ಆಪ್ತರಿಗೆ ಮತ್ತು ಕವಿಗಳಿಗೆ ಕಾಸರಗೋಡು ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ ಗೌರವ ಸನ್ಮಾನ ನೀಡಿ ಗೌರವಿಸಲಾಗುವುದು.
ಚುಟುಕು ಸಾಹಿತ್ಯ ಸಮ್ಮೇಳನ ಅಂತಾರಾಜ್ಯ ಕವಿಗೋಷ್ಠಿಯಲ್ಲಿ ಐವತ್ತೆರಡು ಕವಿಗಳು ಚುಟುಕು ವಾಚನ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ವಿರಾಜ್ ಅಡೂರ್ ವಹಿಸುವರು.
ಶ್ರೀ ಗುರುರಾಜ ಕಾಸರಗೋಡು ಸಾರಥ್ಯದ ಸಾಂಸ್ಕೃತಿಕ ನೃತ್ಯ ವೈಭವ ದಿನದ ಮನೋರಂಜನಾ ಆಕರ್ಷಣೆಯಾಗಲಿದೆ.
ಚುಟುಕು ಸಮ್ಮೇಳನ 2026 ಇದರ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಧಾಕೃಷ್ಣ ಕೆ ಉಳಿಯತಡ್ಕ ಅವರು ವಹಿಸಲಿದ್ದಾರೆ. ಗಣ್ಯರು ಮತ್ತು ಗೌರವಾನ್ವಿತರು ವೇದಿಕೆಯಲ್ಲಿರುತ್ತಾರೆ.
ಚುಟುಕು ಸಿರಿ ರತ್ನ ಪ್ರಶಸ್ತಿ 2016, 18 ಕವಿಗಳು ಸ್ವೀಕರಿಸಲಿದ್ದಾರೆ.
ಶ್ರೀ ವಿಶಾಲಾಕ್ಷ ಪುತ್ರಕಳ ನಿರ್ವಹಿಸಿ ವಸಂತ ಕೆರೆಮನೆ ವಂದನಾರ್ಪಣೆ ಮಾಡಲಿರುವರು
ಈ ಕಾರ್ಯಕ್ರಮದ ಆಯೋಜಕರು ಮತ್ತು ರೂವಾರಿಗಳಾದ ಸಂಘಟಕ ಕಾಸರಗೋಡು ಜಿಲ್ಲೆಯ ನುಳ್ಳಿಪಾಡಿ ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ಸ್ಥಾಪಕರಾದ ಡಾ ವಾಮನರಾವ್ ಬೇಕಲ್ ಮತ್ತು ಅವರ ಪತ್ನಿ ಸಂಧ್ಯಾ ರಾಣಿ ಅವರ ಕನ್ನಡ ಪ್ರೀತಿ ಮತ್ತು ಅಭಿಮಾನಗಳನ್ನು ಸ್ಮರಿಸಬೇಕು. ಕಾಸರಗೋಡಿನ ಕನ್ನಡ ಭವನವನ್ನು ಕನ್ನಡಿಗರ ಮಾತೃಭಾಷೆಯ ಶಕ್ತಿ ಕೇಂದ್ರವಾಗಿ ನೆಲೆ ನಿಲ್ಲಿಸಿದ ನಿರ್ಮಾತೃ ಇವರು. ಮನೆಯ ಭಾಗವನ್ನು ಸಾರ್ವಜನಿಕ ಗ್ರಂಥಾಲಯವಾಗಿ ನಿರ್ಮಿಸಿದ ಉದಾರತೆ ಸ್ಮರಣೀಯ. ಇಲ್ಲಿ 20000ಕ್ಕೂ ಹೆಚ್ಚು ವೈವಿಧ್ಯಮಯ ಕನ್ನಡ ಸಾಹಿತ್ಯ ರತ್ನಗಳು ಆಸಕ್ತರಿಗೆ ಲಭ್ಯ ಮಾಡಿರುವುದು ಸ್ತುತ್ಯಾರ್ಹ.
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು

