“ಮನೆ ಮನೆಯಲ್ಲಿ ರಾಮರಾಜ್ಯ ನಿರ್ಮಾಣವಾದರೆ, ದೇಶದಲ್ಲಿ ರಾಮರಾಜ್ಯ ಬರಲು ವಿಳಂಬವಾಗದು !” – ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ
ಫೋಂಡಾ (ಗೋವಾ): ಸನಾತನ ಸಂಸ್ಥೆಯು ರಾಮರಾಜ್ಯ ನಿರ್ಮಾಣಕ್ಕಾಗಿ ಕಾರ್ಯಪ್ರವೃತ್ತವಾಗಿರುವುದು ಅತ್ಯಂತ ಶ್ಲಾಘನೀಯ ವಿಷಯವಾಗಿದೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ರಾಮರಾಜ್ಯವನ್ನು ನಿರ್ಮಿಸಿದರೆ, ದೇಶದಲ್ಲಿ ರಾಮರಾಜ್ಯ ನಿರ್ಮಾಣವಾಗಲು ಹೆಚ್ಚು ಸಮಯ ಹಿಡಿಯುವುದಿಲ್ಲ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 24ನೇ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಪ್ರತಿಪಾದಿಸಿದರು. ಗೋವಾದ ಫೋಂಡಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಮುಖ್ಯ ಆಶ್ರಮಕ್ಕೆ ಅವರು ಭೇಟಿ ನೀಡಿ ಮಾತನಾಡಿದರು.
ಈ ಶುಭ ಸಂದರ್ಭದಲ್ಲಿ ಸನಾತನದ ಸಂತರಾದ ಪೂಜ್ಯ ಪೃಥ್ವಿರಾಜ್ ಹಜಾರೆ ಅವರು ಸ್ವಾಮೀಜಿಯವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ ಮತ್ತು ಸನಾತನದ ಸಾಧಕರಾದ ಶ್ರೀ. ನಿಷಾದ್ ದೇಶಮುಖ್ ಅವರು ಸ್ವಾಮೀಜಿಯವರಿಗೆ ಆಶ್ರಮ ದರ್ಶನ ಮಾಡಿಸುವಾಗ ಸನಾತನದ ರಾಷ್ಟ್ರ ಮತ್ತು ಧರ್ಮ ಪ್ರಸಾರದ ಕಾರ್ಯಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ರಾಮನಾಥ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಶ್ರೀ. ವಲ್ಲಭ ಕುಂಕಳ್ಳಿಕ್ಕರ್, ಸಮಿತಿಯ ಕಾನೂನು ಸಲಹೆಗಾರರಾದ ನ್ಯಾಯವಾದಿ ರಾಜೇಶ್ ತಳವಲಿಕರ್, ಸಮಿತಿಯ ಸದಸ್ಯರಾದ ಶ್ರೀ. ಸಂಜೀವ್ ಬಾಲೆ ಮತ್ತು ಶ್ರೀ. ರುದ್ರ ಕಾಪಡಿ, ಹಾಗೆಯೇ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಪುರೋಹಿತರಾದ ಶ್ರೀ. ಸಂತೋಷ್ ಆಚಾರ್ಯ ಮತ್ತು ಶ್ರೀ. ವಸಂತ ಆಚಾರ್ಯ ಉಪಸ್ಥಿತರಿದ್ದರು. ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ತರಾದ ಶ್ರೀ. ವೀರೇಂದ್ರ ಮರಾಠೆ ಅವರು ಶ್ರೀ ರಾಮನಾಥ ದೇವಸ್ಥಾನಕ್ಕೆ ತೆರಳಿ ಸ್ವಾಮೀಜಿಯವರನ್ನು ಆಶ್ರಮಕ್ಕೆ ಆಗಮಿಸುವಂತೆ ಪ್ರಾರ್ಥಿಸಿದ್ದರು.
ಈ ವೇಳೆ ಸ್ವಾಮೀಜಿಯವರ ಗುರುಗಳಾದ ಶ್ರೀಮದ್ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ ಪಾದುಕೆಗಳ ಪೂಜೆಯನ್ನು ಸನಾತನದ ಸಾಧಕ ದಂಪತಿಗಳಾದ ಡಾ. ಪಾಂಡುರಂಗ ಮರಾಠೆ ಮತ್ತು ಸೌ. ಮಂಗಳಾ ಮರಾಠೆ ನೆರವೇರಿಸಿದರು. ನಂತರ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರಿಗೆ ಪಂಚಾರತಿ ಮಾಡಲಾಯಿತು. ತದನಂತರ ಸನಾತನದ ಸಂತರಾದ ಪೂಜ್ಯ ಪೃಥ್ವಿರಾಜ್ ಹಜಾರೆಯವರು ಸ್ವಾಮೀಜಿಯವರನ್ನು ಗೌರವಿಸಿದರು.
ಸಾಧಕರಿಗೆ ಮಾರ್ಗದರ್ಶನ ನೀಡುತ್ತಾ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಹೀಗೆಂದರು :
“ಸನಾತನ ಸಂಸ್ಥೆಯು ಸನಾತನ ಧರ್ಮದ ರಕ್ಷಣೆ ಮತ್ತು ಪ್ರಚಾರಕ್ಕಾಗಿ ಬದ್ಧವಾಗಿರುವುದನ್ನು ಕಂಡು ತುಂಬಾ ಸಂತೋಷವಾಗುತ್ತಿದೆ.‘ಇತರರ ಜೀವನವನ್ನು ಆನಂದಮಯವಾಗಿಸಿ ಅದರ ಮೂಲಕ ಸ್ವತಃ ಆನಂದವನ್ನು ಪಡೆಯುವುದು’ ಎಂಬ ತತ್ವದ ಮೇಲೆ ಸನಾತನ ಸಂಸ್ಥೆ ನಡೆಯುತ್ತಿದೆ.ಸನಾತನವು ಎಲ್ಲರನ್ನು ಸಂಘಟಿಸಿ ಅವರಲ್ಲಿ ಈಶ್ವರನ ಸೇವೆಯ ಮೂಲಕ ಧರ್ಮ ಜಾಗೃತಿ ಮೂಡಿಸುತ್ತಿದೆ. ಸನಾತನದ ಸಾಧಕರು ಪ್ರತಿದಿನ ದೇವರ ಉಪಾಸನೆ ಮಾಡುತ್ತಾರೆ ಮತ್ತು ಎಲ್ಲರ ಶುಭವನ್ನು ಕೋರುತ್ತಾರೆ. ಇದು ಸತ್ಸಂಗದ ಮಹತ್ವವಾಗಿದೆ.”
“ಸನಾತನದ ಸಾಧಕರು ಭಗವಾನ್ ಶ್ರೀಕೃಷ್ಣ ಮತ್ತು ಶ್ರೀರಾಮನ ಉಪಾಸನೆಯನ್ನು ಹೀಗೆಯೇ ಭಕ್ತಿಯಿಂದ ಮುಂದುವರಿಸಲಿ. ನಾವು ದೇವರೊಂದಿಗೆ ಸಂಪರ್ಕ ಹೊಂದಿದಾಗ, ದೇವರು ನಮ್ಮ ಕಾರ್ಯದಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುತ್ತಾನೆ. ದೇವರ ಉಪಾಸನೆ ಮಾಡುವವರನ್ನು ನೋಡುವ ಇತರರ ದೃಷ್ಟಿಕೋನವೂ ಸಕಾರಾತ್ಮಕವಾಗುತ್ತದೆ. ಇದರಿಂದಾಗಿ ಈಶ್ವರ ಭಕ್ತಿ ಮಾಡುವವರು ಯಾವುದೇ ಭಯ ಪಡುವ ಅಗತ್ಯವಿಲ್ಲ. ಸಾಧಕರ ಮೇಲೆ ಭಗವಂತನ ಕೃಪಾಶೀರ್ವಾದ ಸದಾ ಇರಲಿ, ಅವರ ಕಷ್ಟಗಳು ದೂರವಾಗಲಿ ಎಂದು ಶ್ರೀರಾಮ ಮತ್ತು ಶ್ರೀ ವೀರವಿಠ್ಠಲನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.”
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಕ್ಕೆ ಇತ್ತೀಚೆಗಷ್ಟೇ 550 ವರ್ಷಗಳು ಪೂರ್ಣಗೊಂಡಿವೆ. ಈ ನಿಮಿತ್ತ 28 ನವೆಂಬರ್ 2025 ರಂದು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಮಠದ ಆವರಣದಲ್ಲಿ ಶ್ರೀರಾಮನ 77 ಅಡಿ ಎತ್ತರದ ಭವ್ಯ ಕಂಚಿನ ಮೂರ್ತಿಯನ್ನು ಅನಾವರಣಗೊಳಿಸಲಾಗಿತ್ತು.

