ಪಕ್ಕಿಲು ಮೂಜಿ ಒಂಜೇಗೂಡುಡು ಬದುಕೊಂದುಂಡುಗೆ, ಕೆಮ್ಮೆಲೆತ ಬ್ರಹ್ಮ, ಡಿಂಗಿರಿಮಾಮ ಇಂತಹ ಪ್ರಸಿದ್ಧ ತುಳು ಹಾಡುಗಳ ಗಾಯಕ, ಸಂಗೀತಾ ಕ್ಯಾಸೆಟ್ ಗಳಿಂದ ಮನೆಮಾತಾದ ಹೆಚ್ ಎಂ ಮಹೇಶ್ ಇಂದು ನಾವು ಕೇಳುವ ಎಲ್ಲಾ ತುಳು ಮತ್ತು ಹಳೆಯ ಕನ್ನಡ ಹಾಡುಗಳ ರೆಕಾರ್ಡಿಂಗ್ ಮತ್ತು ಪ್ರಸಾರದಿಂದ ಈ ಎರಡೂ ಭಾಷೆಗಳ ಹಾಡುಗಳ ಉಳಿವಿಗಾಗಿ ಶ್ರಮಿಸಿದವರು.
ಕಾಸರಗೋಡಿನ ಬದಿಯಡ್ಕದ ಕಾನಾ ಗ್ರಾಮದಲ್ಲಿ ಹುಟ್ಟಿ, ಮದರಾಸಿಗೆ ಹೋಗಿ ಅಲ್ಲಿ ಗ್ರಾಮೋಫೋನ್ ತಟ್ಟೆಗಳಿಂದ ಹಿಡಿದು, ಕ್ಯಾಸೆಟ್, ಸೀಡಿಗಳ ವರೆಗೆ ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದವರು.
ತನ್ನ ಒಡೆತನದ ಮಾಸ್ಟರ್ ರೆಕಾರ್ಡಿಂಗ್ ಕಂಪೆನಿಯಲ್ಲಿ ಹಲವಾರು ಗಾಯಕ ಗಾಯಕಿರಿಂದ ಹಾಡಿಸಿ, ಕದ್ರಿಗೋಪಾಲ್ ನಾಥ್ , ಮ್ಯಾಂಡೋಲಿನ್ ಶ್ರೀನಿವಾಸ್ ಮತ್ತಿತರಿಂದ ವಾದ್ಯ ಸಂಗೀತ ನುಡಿಸಿ, ಯಕ್ಷಗಾನ ಹರಿಕಥೆಗಳ ಧ್ವನಿಮುದ್ರಿಸಿ ಅದನ್ನು ಇಂದಿಗೂ ಸಂಸ್ಕರಿಸಿ ಇಟ್ಟ ಕೀರ್ತಿ ಹೆಚ್ ಎಂ ಮಹೇಶ್ ಅವರಿಗೆ ಸಲ್ಲುತ್ತದೆ.
ಈ ಮಹಾನ್ ಸಾಧಕನ ಸಾಧನೆಗಳನ್ನು ವೇದಿಕೆಯಲ್ಲಿ ಅವರದೇ ಹಾಡುಗಳ ಮೂಲಕ ಪ್ರಸ್ತುತ ಪಡಿಸಿ, ಅವರ ಆಪ್ತ ಒಡನಾಡಿಗಳಿಂದ ನುಡಿ ನಮನದ ಮೂಲಕ ಗೌರವ ಸಮರ್ಪಿಸಲು ಐಲೇಸಾ ಇದೇ ಮಾರ್ಚ್ ತಿಂಗಳ ಒಂದನೆ ತಾರೀಕು ಸಂಜೆ ಐದು ಗಂಟೆಗೆ ಬನಶಂಕರಿಯ ಸುಚಿತ್ರಾ ಸಿನಿಮಾ ಮತ್ತು ಕಲ್ಚರಲ್ ಅಡಿಟೋರಿಯಂ ನಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಿದೆ.
ಪ್ರಖ್ಯಾತ ಸಂಗೀತ ನಿರ್ದೇಶಕರುಗಳಾದ ಡಾ. ಜಯಶ್ರೀ ಅರವಿಂದ್, ಅಶೋಕ್ ಚರಣ್, ವಿಮನೋಹರ್, ಗಾಯಕಿಯರಾದ ಬಿ.ಕೆ ಸುಮಿತ್ರಾ, ಸಂಗೀತಾ ಕಟ್ಟಿ , ಲಹರಿ ಮ್ಯೂಸಿಕ್ನ ಲಹರಿ ವೇಲು ಮತ್ತು ಹೆಚ್ ಎಂ ಮಹೇಶ್ ಅವರ ಕುಟುಂಬ ಸದಸ್ಯ ಖ್ಯಾತ ಜಾದೂಗಾರ ಪ್ರೋಫೆಸರ್ ಶಂಕರ್ ಮಹೇಶ್ ಅವರನ್ನು ಸಂಸ್ಮರಿಸಲಿದ್ದಾರೆ.
ಐಲೇಸಾದ ಹಾಡುಗಾರರಾದ ರಮೇಶ್ಚಂದ್ರ, ನಾಗಚಂದ್ರಿಕಾ, ಸುಶೀಲಾ ರಾವ್, ಸುಧಾಕರ್ ಶೆಟ್ಟಿ, ಸುಮಾಕೋಟೆ, ಆತ್ಮರಾಮ್ ಆಳ್ವ, ಪ್ರಕಾಶ್ ಪಾವಂಜೆ, ಹರಿಪ್ರಸಾದ್ ಗಾಯನನಮನ ಸಲ್ಲಿಸಲಿದ್ದಾರೆ.
ತಾಂತ್ರಿಕವಾಗಿ ಗೋಪಾಲ್ ಪಟ್ಟೆ ಮತ್ತು ಐಲೇಸಾದ ಸದಸ್ಯರಾದ ಅಜೇಶ್ ಚಾರ್ಮಾಡಿ, ಪಳ್ಳಿ ವಿಶ್ವನಾಥ್ ಶೆಟ್ಟಿ, ವಿವೇಕಾನಂದ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಶಾಂತಾರಾಮ್ ಶೆಟ್ಟಿ ಮತ್ತು ಅನಂತ್ ರಾವ್ ನಿರ್ವಹಿಸಲಿದ್ದಾರೆ ಎಂದು ಮಾಧ್ಯಮ ಸಂಚಾಲಕ ಸೂರಿ ಮಾರ್ನಾಡು ತಿಳಿಸಿದ್ದಾರೆ.

