ತಾಲೂಕು ಕಾನೂನು ಸೇವೆಗಳ ಸಮಿತಿಯ ಉದ್ಘಾಟನೆ

0
7


ವರದಿ ರಾಯಿ ರಾಜ ಕುಮಾರ

ದ ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೂಡುಬಿದಿರೆ ನ್ಯಾಯಾಂಗ ಇಲಾಖೆ, ವಕೀಲರ ಸಂಘ ಇವುಗಳ ಸಹಯೋಗದೊಂದಿಗೆ ತಾಲೂಕು ಕಾನೂನು ಸೇವೆಗಳ ಸಮಿತಿಯ ಉದ್ಘಾಟನಾ ಸಮಾರಂಭ ಫೆಬ್ರವರಿ 23ರಂದು ಮೂಡುಬಿದಿರೆ ನ್ಯಾಯಾಲಯದ ಆವರಣದಲ್ಲಿ ನಡೆಯಿತು. ದ ಕ ಜಿಲ್ಲಾ ಪ್ರಧಾನ ಜಿಲ್ಲಾ ನ್ಯಾಯಾಧೀಶ ಬಸವರಾಜ್ ಅವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸ್ಥಳೀಯ ಕುಂದು ಕೊರತೆಗಳನ್ನು ನಿವಾರಿಸಿ ಜನರಿಗೆ, ಬಡವರಿಗೆ ನ್ಯಾಯವನ್ನು ಒದಗಿಸುವ ಜವಾಬ್ದಾರಿ ಇಂದಿನಿಂದ ಹೆಚ್ಚಾಗಿದೆ ಎಂದು ವಕೀಲರುಗಳಿಗೆ ಕಿವಿ ಮಾತನ್ನು ಹೇಳಿದರು.


ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶರು ಜೈಬುನ್ನೀಸಾ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ ತಾಲೂಕಿನಲ್ಲಿರುವ ಬಡವರಿಗೆ ತಾಲೂಕು ಆಡಳಿತ ವ್ಯವಸ್ಥೆಯೊಂದಿಗೆ ಮತ್ತು ಪೊಲೀಸ್ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ಬಡವರಿಗೆ ಸಹಾಯವನ್ನು ಮಾಡುವಂತಹ ಅವಕಾಶವನ್ನು ಸೆಕ್ಷನ್ 12ರ ಅಡಿಯಲ್ಲಿ ಮಾಡಿಕೊಡಲಾಗಿದೆ. ಹಿರಿಯ ನಾಗರಿಕರು ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ ಉಚಿತ ಕಾನೂನು ನೆರವನ್ನು ಕೂಡ ಒದಗಿಸುವ ಜವಾಬ್ದಾರಿ ವಕೀಲರುಗಳ ಮೇಲೆ ಅವಲಂಬಿತವಾಗಿದೆ ಎಂದು ಸೂಚಿಸಿದರು.
ಮೂಡುಬಿದಿರೆಯ ಮಣ್ಣಿನ ಮಗ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ , ರಾಜ್ಯಪಾಲ ಅಬ್ದುಲ್ ನಜೀರ್ ಅವರ ಬರಪೂರ ಕೊಡುಗೆಗಳ ಸಹಾಯಗಳನ್ನು ಹಿರಿಯ ನ್ಯಾಯವಾದಿಗಳಾದ ಕೆ ಆರ್ ಪಂಡಿತ್, ಸೀನಿಯರ್ ಕಮಿಟಿ ಚೇರ್ಮನ್ ಬಾಹುಬಲಿ ಪ್ರಸಾದ್ ನೆನಪಿಸಿಕೊಂಡರು.
ಮೂಡುಬಿದರೆ ತಾಲೂಕು ಕಾನೂನು ಸೇವೆಗಳ ಸಮಿತಿಯ ಪ್ರಥಮ ಅಧ್ಯಕ್ಷ, ಹಿರಿಯ ಸಿವಿಲ್ ನ್ಯಾಯಾಧೀಶ ಮಧುಕರ್ ಪಿ ಭಾಗವತ್ ಮಾತನಾಡಿ ಎಲ್ಲರ ಸಹಕಾರದೊಂದಿಗೆ ಹಾಗೂ ಉತ್ತಮ ಸ್ಪಂದನೆಯೊಂದಿಗೆ ಜವಾಬ್ದಾರಿಯುತ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ಆಶ್ವಾಸನೆಯನ್ನು ನೀಡಿದರು. ವಕೀಲರ ಸಂಘದ ಅಧ್ಯಕ್ಷ ಹರೀಶ್ ಪಿ ಅಧ್ಯಕ್ಷೀಯ ಭಾಷಣದಲ್ಲಿ ಜಿಲ್ಲಾ ಪ್ರಾಧಿಕಾರದ ಸಹಾಯವನ್ನು ಯಾಚಿಸಿದರು.
ವೇದಿಕೆಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕಿಯರುಗಳಾದ ನೇತ್ರಾವತಿ, ಶೋಭಾ ಎಸ್, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ, ಜಯಪ್ರಕಾಶ್ ಭಂಡಾರಿ ಹಾಜರಿದ್ದರು. ಎಂಎಸ್ ತಂತ್ರಿ ಸ್ವಾಗತಿಸಿದರು. ಸುಧಾಮಣಿ ಎಸ್ ಕಾರ್ಯಕ್ರಮ ನಿರ್ವಹಿಸಿದರು. ಜಗನ್ನಾಥ ವಂದಿಸಿದರು.
.

LEAVE A REPLY

Please enter your comment!
Please enter your name here