ಸಮಾಜಮುಖಿ ಶಿಕ್ಷಣ ಇಂದಿನ ಅಗತ್ಯ : ಸಿಎಂ ಸಿದ್ದರಾಮಯ್ಯ

0
33

ಉಡುಪಿ: ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವುದೇ ಶಿಕ್ಷಣದ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ವೈಚಾರಿಕ ಮತ್ತು ವೈಜ್ಞಾನಿಕತೆ ಬೆಳೆಸುವ ಸಮಾಜಮುಖಿ ಶಿಕ್ಷಣ ಇಂದಿನ ಅಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾರ್ಕಳ ಕುಕ್ಕುಂದೂರು ಕಿಸಾನ್​ ಸಭಾ ಟ್ರಸ್ಟ್​ ವತಿಯಿಂದ ನಿರ್ಮಿಸಲಾಗಿರುವ ಕಿಸಾನ್​ ಸಭಾ ಸಭಾಂಗಣ ಹಾಗೂ ಮಹಾತ್ಮಾಗಾಂಧಿ ಪ್ರೌಢಶಾಲೆ 35ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಅಸಮಾನತೆಯಿಂದ ಕೂಡಿದ ಸಮಾಜದಲ್ಲಿ ಶೂದ್ರ ವರ್ಗ ಅಕ್ಷರ ಸಂಸತಿಯಿಂದ ವಂಚಿತವಾಗಿತ್ತು. ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗದೇ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ ಎಂಬುದಾಗಿ ಡಾ.ಬಿ.ಆರ್​.ಅಂಬೇಡ್ಕರ್​ ತಿಳಿಸಿದ್ದರು. ಸಮಾನ ಅವಕಾಶಗಳನ್ನು ಕೊಡುವುದು ಶಿಕ್ಷಣ ಮೂಲ ಉದ್ದೇಶವಾಗಬೇಕು.

ಇದಕ್ಕಾಗಿ ಸರ್ಕಾರ ಭಾಗ್ಯ ಯೋಜನೆಗಳನ್ನು ರೂಪಿಸಿದೆ. ಸ್ವಾತಂತ್ರ$್ಯ ಬಂದ ಕಾಲದಲ್ಲಿ ಶೇ, 12 ರಿಂದ ಶೇ. 15ರಷ್ಟಿದ್ದ ಸಾಕ್ಷರತೆ ಇಂದು ಶೇ. 75ಕ್ಕೆ ಹೆಚ್ಚಿದ್ದರೂ, ಶಿಕ್ಷಣ ಪಡೆದವರು ಕಂದಾಚಾರಗಳಿಗೆ, ಮೌಢ್ಯಗಳಿಗೆ ಬಲಿಯಾಗುತ್ತಿದ್ದಾರೆ. ಪ್ರೌಢಶಾಲೆಗಳಲ್ಲಿ ಜ್ಞಾನದ ಜೊತೆಗೆ ವಿವೇಕವನ್ನು ಕಲಿಸುವುದು ಮುಖ್ಯ ಎಂದರು.

ನಮ್ಮ ಸರ್ಕಾರ ನುಡಿದಂತೆ ನಡೆಯುತ್ತದೆ. ಕಾರ್ಕಳ ಜನತೆಯ ಬೇಡಿಕೆಗಳನ್ನು ಹಂತ ಹಂತವಾಗಿ ಪೂರೈಸಲಾಗುವುದು. 2013 ರಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ನೀಡಲಾಗಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 2023ರಲ್ಲಿ ನೀಡಿದ 590 ಭರವಸೆಗಳಲ್ಲಿ ಕಳೆದ ಎರಡೂವರೆ ವರ್ಷದಲ್ಲಿ 243 ಭರವಸೆಗಳನ್ನು ಈಡೇರಿಸಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52,000 ಕೋಟಿಗೂ ಹೆಚ್ಚು ವೆಚ್ಚ ಮಾಡಲಾಗುತ್ತಿದ್ದು, ಎಲ್ಲ ಜಾತಿಧರ್ಮಗಳ ಬಡವರಿಗೆ ಗ್ಯಾರಂಟಿಯ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದುವರೆಗೆ 1.20 ಲಕ್ಷ ಕೋಟಿಗಳನ್ನು ಗ್ಯಾರಂಟಿಗಳಿಗೆ ನೀಡಲಾಗಿದೆ. ದೇಶದ ಸಂಪತ್ತಿನ ಸಮಾನ ಹಂಚಿಕೆಗೆ ಪ್ರಯತ್ನ ಸದಾ ಇರಲಿದೆ ಎಂದರು.

ಮಹಾಮಸ್ತಕಾಭಿಷೇಕಕ್ಕೆ ನೆರವು

ಕಾರ್ಕಳದಲ್ಲಿ 2027ರಲ್ಲಿ ನಡೆಯುವ ಐತಿಹಾಸಿಕ ಬಾಹುಬಲಿ ಮಹಾಮಸ್ತಕಾಭಿಷೆೇಕಕ್ಕೆ ಅರ್ಥಿಕ ಸಹಾಯವನ್ನು ಇಲ್ಲಿನ ಜನಪ್ರತಿನಿಧಿಗಳು ಕೋರಿದ್ದು, ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡಲಿದೆ ಎಂದರು.

ಪ್ರಾಮಾಣಿಕ ರಾಜಕಾರಣಿ

ಕಿಸಾನ್​ ಸಭಾ ಮೂಲಕ ನಂತರ ಪ್ರೌಢಶಾಲೆಯನ್ನು ಸ್ಥಾಪಿಸಿ, ನಿರ್ಗತಿಕ ಹಾಗೂ ಓದಿನಲ್ಲಿ ಹಿಂದುಳಿದಿರುವ ಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಕಾರ್ಯದಲ್ಲಿ ವೀರಪ್ಪ ಮೊಯಿಲಿಯವರು ತೊಡಗಿರುವುದು ಸಂತೋಷದ ವಿಷಯ. ಇವತ್ತಿನ ರಾಜಕೀಯದಲ್ಲಿ ಪ್ರಾಮಾಣಿಕತೆ ಕಷ್ಟ ಸಾಧ್ಯ. ಆದರೆ ಮೊಯಿಲಿಯವರು ಹಳೆ ತಲೆಮಾರಿನವರು. ಇದನ್ನು ಮಾಡಿ ತೋರಿಸಿದ್ದಾರೆ ಎಂದು ಸಿಎಂ ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಲ ಆರ್​. ಹೆಬ್ಬಾಳ್ಕರ್​, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್​.ಸಿ ಮಹದೇವಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಸಚಿವ ಎಸ್​ ಮಧು ಬಂಗಾರಪ್ಪ, ಕರಾವಳಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್​, ಕಾರ್ಕಳ ಶಾಸಕ ಸುನೀಲ್​ ಕುಮಾರ್​, ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಶೋಕ್​ ಕುಮಾರ್​ ಕೊಡವೂರು, ಮಾಜಿ ಸಿಎಂ ಎಂ.ವೀರಪ್ಪ ಮೊಯಿಲಿ , ಉದಯ್​ ಶೆಟ್ಟಿ ಮುನಿಯಾಲು, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್​ ಬಾಯಲ್​, ಜಿಲ್ಲಾ ಪೊಲೀಸ್​ ಅಧೀಕ್ಷಕ ಹರಿರಾಂ ಶಂಕರ್​ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here