ಉಡುಪಿ : ಜಿಲ್ಲೆಯಲ್ಲಿ ಪ್ರತಿ ಗರ್ಭಿಣಿಗೂ ತಾಯಿಕಾರ್ಡ್ ನೀಡಬೇಕು. ಅವರಿಗೆ ಆರೋಗ್ಯದ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಹೇಳಿದರು.
ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಅರೋಗ್ಯ ಇಲಾಖೆಯ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗರ್ಭಿಣಿಯರಿಗೆ ಹಾಗೂ ನವಜಾತ ಶಿಶುಗಳಿಗೆ ಅಗತ್ಯ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯಲ್ಲಿ ತಾಯಿ ಮರಣ ಸಂಖ್ಯೆಯನ್ನು ಶೂನ್ಯಕ್ಕಿಳಿಸಬೇಕು ಎಂದರು.
ಹೆರಿಗೆ ನಂತರವೂ ಸಹ ತಾಯಿ ಮತ್ತು ಮಕ್ಕಳಿಗೆ ಸೂಕ್ತ ಚಿಕಿತ್ಸೆಗಳ ಅವಶ್ಯಕತೆ ಇದ್ದಲ್ಲಿ ನೀಡಬೇಕು. ಇತರೆ ತಜ್ಞರ ಅವಶ್ಯಕತೆ ಇದ್ದಲ್ಲಿ ಅದನ್ನು ಸಹ ನೀಡುವಂತೆ ಶಿಫಾರಸು ಮಾಡಿ ಚಿಕಿತ್ಸೆ ಪಡೆಯುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಕ್ಕಳಿಗೆ ನೀಡುವ ರೋಗ ನಿರೋಧಕ ಚುಚ್ಚು ಮದ್ದುಗಳನ್ನು ತಪ್ಪದೆ ನೀಡಬೇಕು, ಒಂದು ಮಗು ಸಹ ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಲಸಿಕಾ ಕಾರ್ಯಕ್ರಮದಲ್ಲಿ ಹೊರಗುಳಿದ ಮಕ್ಕಳಿಗೆ ಮರು ದಿನಾಂಕ ನಿಗದಿಪಡಿಸಿ ಲಸಿಕೆ ನೀಡಲು ಮುಂದಾಗಬೇಕು ಎಂದರು.
ಮಾನಸಿಕ ಅಸ್ವಸ್ಥರು ರಸ್ತೆಯಲ್ಲಿ ಅಲೆದಾಡುತ್ತಿರುವುದು ಕಂಡು ಬಂದರೆ ಅವರನ್ನು ತುರ್ತು ಆರೈಕೆ ಮತ್ತು ಚೇತರಿಕೆ ಕೇಂದ್ರಕ್ಕೆ ಕರೆ ತಂದು ಸೂಕ್ತ ಚಿಕಿತ್ಸೆ ನೀಡುವುದರ ಜೊತೆಗೆ ಅವರ ಪೋಷಕರಿಗೆ ತಲುಪಿಸುವ ಕಾರ್ಯವನ್ನು ಸೇವಾ ಮನೋಭಾವದಲ್ಲಿ ಕೈಗೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ರಕ್ತನಿಧಿ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿರುವ ಗುರಿಗಿಂತಲೂ ಹೆಚ್ಚು ಪಟ್ಟು ರಕ್ತದ ದಾಸ್ತಾನು ಇದೆ. ಆದರೆ ಜಿಲ್ಲೆಗೆ ಹೊರ ಜಿಲ್ಲೆಗಳಿಂದ ಉನ್ನತ ವೈದ್ಯಕೀಯ ಸೇವೆಗಳನ್ನು ಪಡೆಯಲು ಜನರು ಬರುತ್ತಾರೆ. ಹಾಗಾಗಿ ಹೆಚ್ಚು ಹೆಚ್ಚು ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದರೊಂದಿಗೆ ರಕ್ತ ಸಂಗ್ರಹಿಸಲು ಮುಂದಾಗಬೇಕು. ಬೈಂದೂರು, ಕುಂದಾಪುರ ಹಾಗೂ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಕ್ತ ನಿಧಿ ಕೇಂದ್ರಗಳನ್ನು ಶೀಘ್ರ ಪ್ರಾರಂಭಿಸಬೇಕು ಎಂದರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಮ್ಮ ಕ್ಲಿನಿಕ್‌ಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ವತಿಯಿಂದ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಅವುಗಳ ಅಭಿವೃದ್ಧಿಗೆ ಮಾರ್ಗಸೂಚಿ ಅನ್ವಯ ನಿಯಮಾನುಸಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕೆಎಂಸಿ ಆಸ್ಪತ್ರೆ ಪ್ರಸೂತಿ ತಜ್ಞೆ ಡಾ. ಶ್ಯಾಮಲಾ, ನವಜಾತಾ ಶಿಶು ತಜ್ಞೆ ಡಾ. ಲೆಸ್ಲಿ ಲೂಯಿಸ್, ತಜ್ಞ ವೈದ್ಯ ಡಾ. ಮುಖ್ಯಪ್ರಾಣ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಭಾಗವಹಿಸಿದ್ದರು.

