ಬೆಂಗಳೂರು, 26 ಫೆಬ್ರವರಿ 2026: ಸತ್ಯ ಯಾವುದು, ಸುಳ್ಳು ಯಾವುದು, ಅಧಿಕಾರ ಮತ್ತು ಆರೋಪದ ನಡುವೆ ಸಿಲುಕಿದಾಗ ಒಬ್ಬ ವ್ಯಕ್ತಿಯ ಬದುಕು ಹೇಗೆ ಅಸ್ತವ್ಯಸ್ತಗೊಳ್ಳುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ಹೊಸ ಸೈಕಲಾಜಿಕಲ್ ಡ್ರಾಮಾ ‘ಅಕ್ಯೂಸ್ಡ್’. ಈ ಬಹುನಿರೀಕ್ಷಿತ ಚಿತ್ರವು ಇಂದು ಫೆಬ್ರವರಿ 27ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ.
ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ಅನುಭೂತಿ ಕಶ್ಯಪ್ ನಿರ್ದೇಶನದ ಈ ಚಿತ್ರವು ಒಬ್ಬ ಆರೋಪಿಯ ದೃಷ್ಟಿಕೋನದಿಂದ ಕಥೆಯನ್ನು ಕಟ್ಟಿಕೊಡುತ್ತದೆ. ಸಮಾಜವು ಒಬ್ಬ ವ್ಯಕ್ತಿಯ ಮೇಲೆ ತೀರ್ಪು ನೀಡುವ ಮೊದಲೇ ಅವರ ಬದುಕು ಹೇಗೆ ನುಚ್ಚುನೂರಾಗುತ್ತದೆ ಎಂಬುದನ್ನು ಇಲ್ಲಿ ಮಾರ್ಮಿಕವಾಗಿ ಚಿತ್ರಿಸಲಾಗಿದೆ.

ಚಿತ್ರದ ಕೇಂದ್ರಬಿಂದು ಡಾ. ಗೀತಿಕಾ ಸೇನ್ (ಕೊಂಕಣ ಸೇನ್ ಶರ್ಮಾ), ಒಬ್ಬ ಪ್ರತಿಷ್ಠಿತ ಸ್ತ್ರೀರೋಗ ತಜ್ಞೆ. ಸಮಾಜದಲ್ಲಿ ಗೌರವಯುತ ಸ್ಥಾನ ಹೊಂದಿರುವ ಈಕೆಯ ಮೇಲೆ ಲೈಂಗಿಕ ದುರ್ನಡತೆಯ ಗಂಭೀರ ಆರೋಪ ಕೇಳಿಬರುತ್ತದೆ. ಈ ಒಂದು ಘಟನೆಯಿಂದ ಆಕೆಯ ವೃತ್ತಿಜೀವನ ಮಾತ್ರವಲ್ಲದೆ, ಪತ್ನಿ ಮೀರಾ (ಪ್ರತಿಭಾ ರಾಂಟಾ) ಜೊತೆಗಿನ ಆಪ್ತ ದಾಂಪತ್ಯವೂ ಸಂಕಷ್ಟಕ್ಕೆ ಸಿಲುಕುತ್ತದೆ. ಸಾರ್ವಜನಿಕರ ಟೀಕೆ ಮತ್ತು ಕಾನೂನಿನ ಸಂಕೋಲೆಗಳ ನಡುವೆ ಗೀತಿಕಾ ಅನುಭವಿಸುವ ಮಾನಸಿಕ ತಳಮಳವೇ ಈ ಚಿತ್ರದ ಜೀವಾಳ.
ಚಿತ್ರದ ಕುರಿತು ಮಾತನಾಡಿದ ಖ್ಯಾತ ನಟಿ ಕೊಂಕಣ ಸೇನ್ ಶರ್ಮಾ, “ಗೀತಿಕಾ ಎಂಬ ಪಾತ್ರವು ತನ್ನ ವೃತ್ತಿ ಮತ್ತು ಘನತೆ ಮೇಲೆ ಸಂಪೂರ್ಣ ಹಿಡಿತ ಹೊಂದಿದ್ದವಳು. ಅಂತಹ ವ್ಯಕ್ತಿ ಆರೋಪದ ಸುಳಿಗೆ ಸಿಲುಕಿ ಆಂತರಿಕವಾಗಿ ಹೇಗೆ ಕುಸಿಯುತ್ತಾಳೆ ಎಂಬ ಕತೆ ನನಗೆ ಭಾವನಾತ್ಮಕವಾಗಿ ಆಪ್ತವಾಯಿತು. ಅದ್ದೂರಿತನಕ್ಕಿಂತ ಮೌನ ಮತ್ತು ನಟನೆಯ ಮೂಲಕವೇ ಕಥೆ ಹೇಳುವ ಇಂತಹ ಪ್ರಯತ್ನಕ್ಕೆ ನೆಟ್ ಫ್ಲಿಕ್ಸ್ ವೇದಿಕೆ ಕಲ್ಪಿಸಿರುವುದು ಶ್ಲಾಘನೀಯ” ಎಂದಿದ್ದಾರೆ.
ಮತ್ತೊಬ್ಬ ಪ್ರಮುಖ ನಟಿ ಪ್ರತಿಭಾ ರಾಂಟಾ ಮಾತನಾಡಿ, “ನಂಬಿಕೆ ಮತ್ತು ಅನುಮಾನದ ನಡುವಿನ ಗೊಂದಲಮಯ ಸ್ಥಿತಿಯಲ್ಲಿ ಬದುಕುವ ಮೀರಾ ಪಾತ್ರ ನನಗೆ ಸವಾಲಾಗಿತ್ತು. ಮಹಿಳೆಯರ ಸಂಕೀರ್ಣ ಭಾವನೆಗಳ ಬಗ್ಗೆ ನೆಟ್ ಫ್ಲಿಕ್ಸ್ ಇಂತಹ ನೈಜ ಕಥೆಗಳನ್ನು ಪ್ರಸ್ತುತಪಡಿಸುತ್ತಿರುವುದು ಸಂತಸದ ವಿಚಾರ” ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಇಂತಹ ಕಥೆಗಳು ಸಂತ್ರಸ್ತರ ಪರವಾಗಿರುತ್ತವೆ. ಆದರೆ ‘ಅಕ್ಯೂಸ್ಡ್’ ಆರೋಪಿಯ ಮಾನಸಿಕ ತುಮುಲಗಳನ್ನು ಮತ್ತು ಸಮಾಜದ ಪೂರ್ವಾಗ್ರಹ ಪೀಡಿತ ನೋಟವನ್ನು ಚರ್ಚೆಗೆ ಒಳಪಡಿಸುತ್ತದೆ. ಅಬ್ಬರದ ಸಂಭಾಷಣೆಗಳಿಗಿಂತ ಭಾವನೆಗಳ ಮೂಲಕವೇ ಪ್ರೇಕ್ಷಕರನ್ನು ಕಾಡುವ ಈ ಚಿತ್ರವು, ಸತ್ಯ ಎಂಬುದು ಅಂದುಕೊಂಡಷ್ಟು ಸರಳವಲ್ಲ ಎಂಬ ಸಂದೇಶ ನೀಡುತ್ತದೆ. ಅಧಿಕಾರ, ದೃಷ್ಟಿಕೋನ ಮತ್ತು ಅನುಮಾನದ ಗೊಂದಲವನ್ನು ಸಾರುವ ಈ ಸಿನಿಮಾ ಈಗ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ.

