ಎಸ್‌ಸಿಎಸ್ ಪ್ರಥಮ ದರ್ಜೆ ಕಾಲೇಜಿನ ಕನ್ನಡ, ಹಿಂದಿ ಹಾಗೂ ತುಳು ಸಂಘಗಳ ಸಂಯೋಜನೆಯಿಂದ ಮಾತೃ ಭಾಷಾ ದಿವಸವನ್ನು ದಿನಾಂಕ 26.02.2026ರಂದು ಕಾಲೇಜಿನಲ್ಲಿ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಅಧ್ಯಕ್ಷರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ನಮ್ಮ ಮಾತೃಭಾಷೆಯನ್ನು ಪ್ರತಿನಿತ್ಯ ಮನೆಯವರೊಂದಿಗೆ ಮಾತನಾಡುವುದರ ಮೂಲಕ ಭಾಷೆಯ ಮೇಲಿನ ಪ್ರೀತಿ ಮತ್ತು ಅಭಿಮಾನವನ್ನು ತೋರಿಸಬೇಕು. ಮಾತೃ ಭಾಷೆ ಕೇವಲ ಭಾಷೆಯಾಗಿರದೇ ಅದು ಸಂಸ್ಕೃತಿಯ ನಿಲುವು ಕೂಡ ಆಗಿದೆ.

ಎಷ್ಟೋ ಜನರು ಆಂಗ್ಲ ಭಾಷೆಯ ವ್ಯಾಮೋಹಕ್ಕೆ ಸಿಲುಕಿ ಮಾತೃಭಾಷೆಯನ್ನು ಅಳಿವಿನಂಚಿಗೆ ತಂದು ನಿಲ್ಲಿಸಿದ್ದಾರೆ. ಮುಂದಿನ ಪೀಳಿಗೆಗೆ ನಾವು ನಮ್ಮ ಮಾತೃಭಾಷೆಯನ್ನು ಉಡುಗೊರೆಯ ರೂಪದಲ್ಲಿ ನೀಡಬೇಕು. ಪ್ರತಿ ಭಾಷೆ ಅಂದರೆ ತುಳು ಕನ್ನಡ ಹಿಂದಿ ಹಾಗೂ ಅನೇಕ ಮಾತೃ ಭಾಷೆಗಳನ್ನು ಬಳಸಿದರೆ ಮಾತ್ರ ನಮ್ಮ ತಾಯಿಯ ಭಾಷೆ ಉಳಿಯುತ್ತದೆ. ಇಲ್ಲದಿದ್ದಲ್ಲಿ ಅದರ ವಿನಾಶಕ್ಕೆ ನಾವೇ ಕಾರಣಕರ್ತರಾಗಿ ಬಿಡುತ್ತೇವೆ. ತುಳುನಾಡಿನಲ್ಲಿ ಕೇವಲ ತುಳು ಒಂದೇ ಭಾಷೆಯನ್ನು ಮಾತನಾಡುವ ಜನರಿಲ್ಲ, ಅನೇಕ ಭಾಷೆಗಳು ಕೂಡ ತುಳುನಾಡಿನ ಮೂಲೆ ಮೂಲೆಯಲ್ಲಿ ಇನ್ನೂ ಜೀವಂತವಾಗಿವೆ.
ಆದರೆ ಅವುಗಳನ್ನು ಮಾತನಾಡುವವರ ಸಂಖ್ಯೆ ಅತಿ ವಿರಳ. ನಾವು ನಮ್ಮ ಮಾತೃ ಭೂಮಿಯನ್ನು ಬಿಟ್ಟು ವಿದೇಶಕ್ಕೆ ತೆರಳಿದರು ಕೂಡ ನಮ್ಮ ತಾಯಿ ನೆಲದ ಜನರೊಂದಿಗೆ ನಮ್ಮ ಭಾಷೆಯನ್ನು ಮಾತನಾಡಿ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಕಾರ್ಯ ಮಾಡಬೇಕು. ಆಗ ಮಾತ್ರ ಭಾಷೆ ಜೀವಂತವಾಗಿರುತ್ತದೆ. ಅಮೆರಿಕದ ಸರ್ಕಾರದಲ್ಲಿ ಭಾರತ ದೇಶದ ಕರ್ನಾಟಕದ ಕರಾವಳಿಯಲ್ಲಿ ಮಾತನಾಡುವ ತುಳು ಭಾಷೆಯನ್ನು ಉಳಿಸಿ ಅಥವಾ ಅದನ್ನು ಅಳಿವಿನಂಚಿನಿಂದ ತಪ್ಪಿಸಲು ಕ್ರಮ ಕೈಗೊಂಡಿದೆ. ಬೇರೆ ದೇಶಗಳಲ್ಲಿಯೇ ನಮ್ಮ ತಾಯಿ ಭಾಷೆಯನ್ನು ಇಷ್ಟು ಗೌರವಿಸಿ, ಭಾಷೆ ಉಳಿವಿಗೆ ಕಾರಣರಾಗುವುದಾದರೆ ನಾವೇಕೆ ನಮ್ಮ ಮಾತೃ ಭಾಷೆಯ ಉಳಿವಿಗಾಗಿ ಪ್ರಯತ್ನಿಸಬಾರದೆಂದು ಮಾತೃ ಭಾಷೆಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌ಸಿ ಕಾಲೇಜಿನಕಾಂಶಪಾಲರಾದ ಹಾರ್ದಿಕ್ ಪಿ. ಚೌಹಾಣ್ ತಮ್ಮ ಮಾತೃಭಾಷೆಯಲ್ಲಿಯೇ ಮಾತನ್ನಾರಂಭಿಸಿ, ಒಂದು ಚಿಕ್ಕ ಕಥೆಯ ಮೂಲಕ ಮಾತೃ ಭಾಷೆಯ ಮೌಲ್ಯದ ಬಗ್ಗೆ ತಿಳಿಸಿದರು. ಶಿಕ್ಷಣಕ್ಕೆಂದು ನಗರಕ್ಕೆ ಬಂದಂತಹ ಸಂದರ್ಭದಲ್ಲಿ ಮಾತೃಭಾಷೆಯನ್ನು ಮರೆತು, ನಗರದ ಭಾಷೆಯಲ್ಲಿ ಮಾತನಾಡಲು ತೊಡಗುತ್ತೇವೆ. ನಮ್ಮ ಮೂಲ ಭಾಷೆಯನ್ನೇ ಮರೆತು ಮತ್ತೊಂದು ಭಾಷೆಗೆ ಆಕರ್ಷಿತರಾಗಿ ಮೂಲ ನೆಲೆಯನ್ನೇ ಮರೆತುಬಿಡುತ್ತೇವೆ. ಇನ್ನು ಮುಂದೆಯಾದರೂ ನಮ್ಮ ಮಾತೃಭಾಷೆಯಲ್ಲಿ ಮಾತನಾಡುತ್ತಾ ಭಾಷೆಯ ಉಳಿವಿಗಾಗಿ ಪ್ರಯತ್ನಿಸೋಣ ಎಂಬ ಪ್ರತಿಜ್ಞೆಯ ಮೂಲಕ ಭಾಷೆಯ ಅಭಿಮಾನದ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸುಚಿತ್ರ ಪಿ. ಶೆಟ್ಟಿ ಪ್ರಾಸ್ತಾವಿಕ ನುಡಿಗಳ ಮೂಲಕ ನಮ್ಮ ಮಾತೃಭಾಷೆ ಕೇವಲ ಒಂದು ಭಾಷೆಯಾಗಿರದೇ ಅದು ನಮ್ಮ ಹೃದಯದ ಭಾಷೆಯು ಕೂಡ ಹೌದು. ಮೊದಲು ನಾವು ನಮ್ಮ ಮಾತೃಭಾಷೆಯ ಉಳಿವಿಗಾಗಿ ಪ್ರಯತ್ನಿಸೋಣ ನಂತರ ವಿದೇಶಿ ಭಾಷೆಗಳನ್ನು ಬಳಸೋಣ. ತುಳುನಾಡಿನ ವೈಭವ, ಭಾಷೆಯ ಶ್ರೀಮಂತಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಸಂಯೋಜಕಿ ಕು.ಸರಸ್ವತಿ ಚಿನ್ನಾಕಟ್ಟಿ, ಹಿಂದಿ ಸಂಘದ ಸಂಯೋಜಕಿ ಕು.ಹರ್ಷಿತ, ಹಾಗೂ ತುಳು ಸಂಘದ ಸಂಯೋಜಕಿ ದೀಕ್ಷಿತ, ಹಿಂದಿ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ರಾಣಿ, ತುಳು ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಸುಹಾನ್ ಮತ್ತು ಕಾಲೇಜಿನ ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾರದ ಗ್ರೀಷ್ಮ , ದ್ವಿತೀಯ ಬಿ.ಎಸ್ಸಿ ಸ್ವಾಗತಿಸಿದರು. ವಿದ್ಯಾರ್ಥಿ ಆಕಾಶ್ ತೃತೀಯ ಬಿ.ಬಿ.ಎ ವಂದಿಸಿದರು. ವಿದ್ಯಾರ್ಥಿ ಶಶಾಂಕ್ ಪ್ರಥಮ ಬಿ.ಬಿ.ಎ ಕಾರ್ಯಕ್ರಮ ನಿರೂಪಿಸಿದರು.

