ಬೆಂಗಳೂರು : ಕೈಕಾಲು ಕಟ್ಟಿ ಬಾಯಿಗೆ ಟೈಪ್ ಸುತ್ತಿ ಪ್ರಿಯಕರನ ಕೊಲೆ ಮಾಡಿದ್ದ ಮಹಿಳೆಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಊರ್ವಶಿ ಅಲಿಯಾಸ್ ಸಿಂಧು ಬಂಧಿತ ಆರೋಪಿ.
ಹಾಸನ ಮೂಲದ ಪ್ರಿಯಕರ ಮೋಹನ ಕೃಷ್ಣ(29) ನನ್ನು ಇತ್ತೀಚೆಗೆ ಕೊಲೆ ಮಾಡಿದ್ದು, ಪ್ರಾಥಮಿಕ ವಿಚಾರಣೆಯಲ್ಲಿ ಕಿರುಕುಳ ನೀಡುತ್ತಿರುವುದಕ್ಕೆ ಪ್ರಿಯಕರನನ್ನು ಕೊಲೆ ಮಾಡಿರುವುದಾಗಿ ಊರ್ವಶಿ ಪೊಲೀಸರಿಗೆ ತಿಳಿಸಿದ್ದಾಳೆ.
ಮೂರು ತಿಂಗಳ ಹಿಂದೆ ಬಾಗಲಗುಂಟೆಯ ವಿಜಯಲಕ್ಷ್ಮಿ ಬಡಾವಣೆಗೆ ಬಂದಿದ್ದ ಮೋಹನ ಕೃಷ್ಣ ಮತ್ತು ಊರ್ವಶಿ ತಮ್ಮನ್ನು ಪತಿ, ಪತ್ನಿ ಎಂದು ಹೇಳಿಕೊಂಡು ನಟರಾಜ್ ಅವರ ಮನೆ ಬಾಡಿಗೆ ಪಡೆದುಕೊಂಡಿದ್ದರು. ಮನೆ ಚಿಕ್ಕದಾಗಿದ್ದ ಕಾರಣ ಅದೇ ಮನೆಯ ಎದುರುಗಡೆ ಮತ್ತೊಂದು ಮನೆ ಬಾಡಿಗೆ ಪಡೆದುಕೊಂಡಿದ್ದರು.
ನಟರಾಜ್ ಮನೆಯಲ್ಲೇ ಹೆಚ್ಚಾಗಿ ವಾಸವಾಗಿದ್ದು, ಮೋಹನ್ ಕೃಷ್ಣ ಪಿಗ್ಮಿ ಕಲೆಕ್ಟರ್, ಊರ್ವಶಿ ಸಹ ನಿರ್ದೇಶಕಿ ಎಂದು ಹೇಳಿಕೊಂಡಿದ್ದರು. ಮೋಹನ್ ಕೃಷ್ಣಗೆ ಮದುವೆಯಾಗಿ ಮಕ್ಕಳಿದ್ದು, ಕೌಟುಂಬಿಕ ಕಾರಣಕ್ಕೆ ಪತ್ನಿಯಿಂದ ದೂರವಾಗಿದ್ದ. ಊರ್ವಶಿಗೂ ಕೂಡ ಮದುವೆಯಾಗಿ ಪತಿಯಿಂದ ದೂರವಾಗಿದ್ದಳು. ಮೋಹನ್ ಕೃಷ್ಣ ಜೊತೆಗೆ ಸಂಬಂಧ ಹೊಂದಿದ್ದಳು.
ಅನಗತ್ಯವಾಗಿ ಅನುಮಾನ ವ್ಯಕ್ತಪಡಿಸಿ ಆತ ಕಿರುಕುಳ ನೀಡುತ್ತಿದ್ದ ಕಾರಣ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಊರ್ವಶಿ ಹೇಳಿಕೆ ನೀಡಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

