ಕಾಸರಗೋಡು : ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ(ರಿ. ),ಕಾಸರಗೋಡು ಇದರ 35ನೇ ಸಂಸ್ಥಾಪನಾ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಕಾಸರಗೋಡು ಕನ್ನಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ “ಕಾಸರಗೋಡು ಗೋ- ಕುಟೀರ”ವನ್ನು ಸದಾ ನೆನಪಿಸುವ ಲಾಂಛನ (ಲೋಗೋ )ವನ್ನು ಖ್ಯಾತ ಹಿರಿಯ ಚಿತ್ರ ಕಲಾವಿದ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಜಿ.ಎಂ.ಹೆಗಡೆ ತಾರಗೋಡ ಅವರು ರಚಿಸಿದ್ದಾರೆ.
ಕರ್ನಾಟಕ ಕಲಾ ವಲಯದಲ್ಲಿ ಜಿ.ಎಂ. ಹೆಗಡೆ ತಾರಗೋಡ ಶಿರಸಿ ತಮ್ಮ ಕಲಾ ಪ್ರಕಾರಗಳ ಸಾಂಪ್ರದಾಯಿಕವಲ್ಲದೇ, ಆಧುನಿಕ ಶೈಲಿ, ನವ್ಯ ಹಾಗೂ ಸಂಪ್ರದಾಯಗಳ ಮಿಶ್ರಣದ ಶೈಲಿ ಇವರದೇ ಶೈಲಿಯಲ್ಲಿ ಮೂಡಿ ಬಂದಿದೆ. ಪ್ರತಿಷ್ಠಿತ ಕಲಾ ಗ್ಯಾಲರಿಗಳಲ್ಲಿ ಇವರ ಕಲಾ ಪ್ರಕಾರಗಳು ದೇಶಾದಾದ್ಯಂತ ಪ್ರದರ್ಶನಗೊಂಡಿದ್ದು,ಎಂ.ಟಿ.ವಿ.ಆಚಾರ್ಯ ರಾಷ್ಟ್ರೀಯ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವೀರಪ್ಪ ದತ್ತಿ ರಾಷ್ಟ್ರೀಯ ಪ್ರಶಸ್ತಿ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.ಜಿ. ಎಂ ಹೆಗಡೆ ತಾರಗೋಡ ಅವರನ್ನು ಕಾಸರಗೋಡು ಗೋ-ಕುಟೀರದ ಉದ್ಘಾಟನಾ ಸಮಾರಂಭ ಮತ್ತು ಪ್ರವೇಶೋತ್ಸವದಂದು ಗೌರವಿಸಲಾಗುವುದು.

ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಸರಗೋಡು ಗೋ- ಕುಟೀರದ ಆವರಣದಲ್ಲಿ ವಿವಿಧ ಸಂಘ ಸಂಸ್ಥೆಗಳು,ಬ್ಯಾಂಕ್ ಉದ್ಯಮ, ಕೈಗಾರಿಕಾ ಸಂಸ್ಥೆಗಳು, ದೇವಸ್ಥಾನ, ಮಠಗಳ, ನೆರವಿನ ಪ್ರಾಯೋಜಕತ್ವದಲ್ಲಿ ಸಾವಯವ ಕೃಷಿ, ಗ್ರಾಮೀಣ ಸ್ವ – ಉದ್ಯೋಗ ಕೇಂದ್ರ, ವಿದ್ಯಾರ್ಥಿಗಳು,ಯುವ ಜನರು, ಮಹಿಳೆಯರು, ಮಹಿಳಾ ಉದ್ಯೋಗಿಗಳಿಗಾಗಿ ಹೊಲಿಗೆ, ವಸ್ತ್ರ ವಿನ್ಯಾಸ, ಡಿಸೈನಿಂಗ್ ತರಬೇತಿ ಕೇಂದ್ರ, ಕಂಪ್ಯೂಟರ್, ಡಿಜಿಟಲ್ ಮಾಧ್ಯಮ ಕೇಂದ್ರ, ಗ್ರಂಥಾಲಯ,ಹಿರಿಯ ನಾಗರಿಕರಿಗಾಗಿ ಗ್ರಾಮೀಣ ವೈದ್ಯಕೀಯ ಕ್ಲಿನಿಕ್, ಗೋ- ಸಾಹಿತ್ಯ ಕುಟೀರ, ಗೋ- ಸಂಕೀರ್ತನಾ ಕುಟೀರ,ಗೋ -ವಿಶ್ರಾಂತಿ ಗ್ರಹ (ರೆಸ್ಟ್ ಹೌಸ್) ವನ್ನು ನಿರ್ಮಿಸಲು ಕಾರ್ಯ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

