ದೇರಳಕಟ್ಟೆ ಒಳಚರಂಡಿ ಅವ್ಯವಸ್ಥೆ ಶಾಶ್ವತ ಪರಿಹಾರ ಕಲ್ಪಿಸಿ – ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಆಗ್ರಹ

0
7

ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳ ತ್ಯಾಜ್ಯ ನೀರು ಹರಿದು ಬಂದು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಸಮೀಪದ ರಿಕ್ಷಾ ಪಾರ್ಕ್ ಬಳಿ ಜಮಾಯಿಸಿರುವ ತ್ಯಾಜ್ಯ ನೀರಿನ ಸಮಸ್ಯೆಯನ್ನು ಖಂಡಿಸಿ, ತುಳುನಾಡ ರಕ್ಷಣಾ ವೇದಿಕೆಯ ಆಟೋ ಘಟಕದ ವತಿಯಿಂದ 28-02-2026 ಶನಿವಾರ ಬೆಳಗ್ಗೆ 10.00 ಗಂಟೆಗೆ ಪ್ರತಿಭಟನಾ ಸಭೆ ಆಯೋಜಿಸಲಾಯಿತು.

ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಅವರು ಮಾತನಾಡಿ, ಉಳ್ಳಾಲ ತಾಲೂಕಿನ ದೇರಳಕಟ್ಟೆ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲದೆ, ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಅನೇಕ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಇಂತಹ ಮಹತ್ವದ ಕೇಂದ್ರದಲ್ಲಿ, ಆಸ್ಪತ್ರೆ ಪಕ್ಕದಲ್ಲೇ ಇರುವ ಆಟೋ ರಿಕ್ಷಾ ಪಾರ್ಕ್ ಬಳಿ ತ್ಯಾಜ್ಯ ನೀರು ದೀರ್ಘಕಾಲದಿಂದ ನಿಂತು ದುರ್ವಾಸನೆ ಬೀರುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ ತ್ಯಾಜ್ಯ ನೀರಿನಿಂದ ಪರಿಸರ ಮಾಲಿನ್ಯ ಉಂಟಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿರುವುದಾಗಿ ಅವರು ಆತಂಕ ವ್ಯಕ್ತಪಡಿಸಿದರು.

ದೇರಳಕಟ್ಟೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವ ಯುವಕರು ಹಾಗೂ ಹಲವರು ಹಾಸ್ಟೆಲ್ ಮತ್ತು ಪಿ.ಜಿ. ವಸತಿಗಳಲ್ಲಿ ವಾಸಿಸುತ್ತಿದ್ದಾರೆ. ಪ್ರತಿದಿನ ನೂರಾರು ಜನ ಸಂಚರಿಸುವ ಈ ಪ್ರದೇಶದಲ್ಲಿ ರಿಕ್ಷಾ ಪಾರ್ಕ್ ಇರುವುದರಿಂದ ಚಾಲಕರು ಹಾಗೂ ಸಾರ್ವಜನಿಕರು ತ್ಯಾಜ್ಯ ನೀರಿನ ದುಷ್ಪರಿಣಾಮವನ್ನು ನೇರವಾಗಿ ಅನುಭವಿಸುತ್ತಿದ್ದಾರೆ. ಮಲೇರಿಯಾ, ಡೆಂಗ್ಯೂ ಸೇರಿದಂತೆ ವಿವಿಧ ಸೋಂಕು ರೋಗಗಳ ಸಂಭವ ಸಾಧ್ಯತೆಯೂ ಹೆಚ್ಚಾಗಿದೆ.

ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳ ತ್ಯಾಜ್ಯ ನೀರು ಹರಿದು ಬಂದು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಸಮೀಪದ ರಿಕ್ಷಾ ಪಾರ್ಕ್ ಬಳಿ ಜಮಾಯಿಸಿರುವ ತ್ಯಾಜ್ಯ ನೀರಿನ ಈ ಪ್ರದೇಶವು ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟಿದ್ದರೂ ಸಮಸ್ಯೆ ಕುರಿತು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಸಂಗತಿಯಾಗಿದೆ. “ಕಣ್ಣಿದ್ದು ಜಾಣಕುರುಡು ತೋರಿಸುವ” ರೀತಿಯಲ್ಲಿ ವರ್ತಿಸುತ್ತಿರುವುದು ಜನರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಟೀಕಿಸಿದರು.

ತಕ್ಷಣ ತ್ಯಾಜ್ಯ ನೀರಿನ ಶಾಶ್ವತ ನಿವಾರಣೆಗೆ ಕ್ರಮ ಕೈಗೊಂಡು, ಸೂಕ್ತ ಒಳಚರಂಡಿ ವ್ಯವಸ್ಥೆ ನಿರ್ಮಿಸಲು ಹಾಗೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲು ಸಂಬಂಧಿಸಿದ ಪಂಚಾಯತ್ ಮತ್ತು ಜಿಲ್ಲಾಡಳಿತ ಅಧಿಕಾರಿಗಳು ಮುಂದಾಗಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು. ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು.

ಕೇಂದ್ರೀಯ ಸಂಘಟನಾ ಕಾರ್ಯದರ್ಶಿ – ಪ್ರಶಾಂತ್ ಭಟ್ ಕಡಬ, ಕೇಂದ್ರೀಯ ಜೊತೆ ಕಾರ್ಯದರ್ಶಿ -ಜ್ಯೋತಿ ಜೈನ್, ಕಾರ್ಯಧ್ಯಕ್ಷ – ಕ್ಲಿಟಸ್ ಲೋಬೊ, ಮಹಿಳಾ ಉಪಾಧ್ಯಕ್ಷೆ – ಶಾರದಾ ಶೆಟ್ಟಿ, ಕಾರ್ಯದರ್ಶಿ – ರಕ್ಷಿತ್ ಕುಡುಪು ತುಳುನಾಡ ರಕ್ಷಣಾ ವೇದಿಕೆ ಆಟೋ ಘಟಕದ ಮುಖಂಡರುಗಳಾದ ಸುಭಾಷ್,ತಾಫಿಕ್,ಸುನಿಲ್,ಸತೀಶ್ ರೈ, ಪ್ರವೀಣ್ ,ಎಸ್ .ರಾಜ,ಜಯಪ್ರಕಾಶ್,ಪುರುಷೋತ್ತಮ,ಪ್ರವೀಣ್ಸು ವರ್ಣ,ದೀನೆಶ್,ರಾಜೇಶ್,ಮೋಹನ್,ಪ್ರಸನ್ನ,ಕಾರ್ತಿಕ್,ದಿನೇಶ್ ಬಾಬು,ರಾಜೇಶ್ ಟರ್ನಿಂಗ್ ಪಾಯಿಂಟ್,ಮಹಮ್ಮದ್ ಕುಂಜಿ,ಅರೀಫ್,ಹನೀಫ್ ಚಾಚ,ಅಸ್ಪಕ್,ಕಿಶೋರ್ ಕುಂಪಲ,ಭವ್ಯ ಸುಭಾಷ್,ಜಗದೀಶ,ಸುಧೀರ್,ಲಿಖಿತ್,ಅಜೀತ್,ರವಿರಾಜ್,ಸುರೇಶ್,ಸಿರಿಲ್ ಡಿಸೋಜ,ದಿವಾಕರ್,ಮೋಹನ್ ಕಂಡಿಲ,ಅಫ್ರೀದ್,ಉಸ್ಮಾನ್,ನಿಹಾರ್,ಹನೀಫ್ ,ಮನೋಜ್, ಜೋಸೆಫ್ ಡಿಸೋಜ,ವಿಲ್ಸನ್,
ಲಾರೆನ್ಸ್ ಮತ್ತಿತರ ತುಳುನಾಡ ರಕ್ಷಣಾ ವೇದಿಕೆ ಮುಖಂಡರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here