ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ದಾನಿಗಳು ಕೊಡುಗೆ ನೀಡಿದ 6 ಹಳೆ ಬಸ್ಸುತಂಗುದಾಣಗಳನ್ನು ಕೆಡವಿ ಹಾಕಿದ್ದರು. ಕಳೆದ 4 ವರ್ಷಗಳಿಂದ ಸಾಣೂರಿನ ಗ್ರಾಮಸ್ಥರು ಬಸ್ಸು ತಂಗುದಾಣವಿಲ್ಲದೆ ಮಳೆ ಬಿಸಿಲಿಗೆ ಮೈಯೊಡ್ಡಿ ಹೆದ್ದಾರಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದರು.

ಪ್ರಯಾಣಿಕರು ಪಡುತ್ತಿರುವ ಸಂಕಷ್ಟವನ್ನು ನೋಡಿ 1 ವರ್ಷದ ಹಿಂದೆ ಸಾಣೂರಿನ ರಿಕ್ಷಾ ಮಾಲಕರು ಮತ್ತು ಚಾಲಕರು ಕಲ್ಲು, ಮರ ಮತ್ತು ಶೇಡ್ ನೆಟ್ ಗಳನ್ನು ಬಳಸಿ ತಾತ್ಕಾಲಿಕ ತಂಗುದಾಣವನ್ನು ನಿರ್ಮಿಸಿದರು.
ಕಳೆದ ಡಿಸೆಂಬರ್ ತಿಂಗಳಿನಲ್ಲಿ ಹೆದ್ದಾರಿ ಇಲಾಖೆಯವರು ಬಸ್ಸು ನಿಲ್ದಾಣ ಕಟ್ಟಡಕ್ಕೆ ಎಂದು 10 ಅಡಿ ಆಳದ ಗುಂಡಿ ತೆಗೆದು ಸುಮಾರು ಒಂದು ತಿಂಗಳುಗಳ ಕಾಲ ಯಾವುದೇ ಕಾಮಗಾರಿ ನಡೆಸದೆ ತೆರೆದೇ ಇಟ್ಟಿದ್ದರು.
ಸಾರ್ವಜನಿಕರ ಒತ್ತಡಕ್ಕೆ ಮಣಿದು ಕೊನೆಗೂ ಗುಂಡಿಯ ಅಡಿಭಾಗದಿಂದ ಕಾಂಕ್ರೀಟ್ ಬ್ಲಾಕ್ಗಳನ್ನು ಕಟ್ಟಿಕೊಂಡು ಬಂದು ಮೇಲ್ಭಾಗಕ್ಕೆ ಮಣ್ಣು ಮುಚ್ಚಿ ಅವೈಜ್ಞಾನಿಕವಾಗಿ ಅಡಿಪಾಯದ ನಿರ್ಮಾಣ ಮಾಡಿದ್ದರು.
ಆ ಬಳಿಕ ಕಳೆದ 2 ತಿಂಗಳುಗಳಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿಗೆ ಇದೀಗ ಚಾಲನೆ ದೊರೆತಿದೆ. ತೀರಾ ಅವೈಜ್ಞಾನಿಕವಾಗಿ ಕಳಪೆ ಗುಣಮಟ್ಟದ ಕಾಮಗಾರಿ ಕಳೆದ 3 ತಿಂಗಳಿನಿಂದ ರಾಜಾರೋಷವಾಗಿ ನಡೆಯುತ್ತಿದ್ದರೂ, ಈ ಬಗ್ಗೆ ಹೆದ್ದಾರಿ ಇಲಾಖೆಗೆ ಗುತ್ತಿಗೆದಾರರಿಗೆ ಮತ್ತು ಜನಪ್ರತಿನಿಧಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯಮುರತ್ತಂಗಡಿ_ ಇರುವತ್ತೂರು ಜಂಕ್ಷನ್ ಬಳಿ ಅರ್ಧಕ್ಕೆ ನಿಂತಿರುವ ಬಸ್ಸು ನಿಲ್ದಾಣ ಕಟ್ಟಡ ಕಾಮಗಾರಿ. ಪಕ್ಕದಲ್ಲಿಯೇ ಲೈಟಿಂಗ್ ಟವರ್ ನಿರ್ಮಾಣ ಮಾಡಲು 10 ಅಡಿ ಆಳದ ಗುಂಡಿ ತೆಗೆದು ಮಣ್ಣು ಮೇಲೆ ಹಾಕಿದ್ದಾರೆ. ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ. ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಧ್ಯಾಪಕರು ಬಸ್ನಿಂದ ಇಳಿದು ಸಂಚರಿಸುವ ರಸ್ತೆ. ಕಳೆದ ನಾಲ್ಕು ತಿಂಗಳಿನಿಂದ ಕುಂಟುತ್ತಾ ಸಾಗುತ್ತಿರುವ ಬಸ್ ನಿಲ್ದಾಣ ಕಟ್ಟಡ ಕಾಮಗಾರಿ.

