ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಬರ್ಬರ ಕೊಲೆ ಸಂಭವಿಸಿದೆ. ಹಸೆಮಣೆ ಏರಿ ಹೊಸ ಜೀವನ ಆರಂಭಿಸಬೇಕಿದ್ದ ಯುವತಿಯೊಬ್ಬಳು ತನ್ನ ಭಾವಿ ಪತಿಯ ಕೈಯಲ್ಲೇ ಕ್ರೂರವಾಗಿ ಕೊಲೆಯಾಗಿರುವ ಘಟನೆ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಜೋಯಾ (19) ಎಂದು ಗುರುತಿಸಲಾಗಿದ್ದು, ಈಕೆಗೆ ಇತ್ತೀಚೆಗಷ್ಟೇ ಶಬೀಲ್ (20) ಎಂಬ ಯುವಕನೊಂದಿಗೆ ನಿಶ್ಚಿತಾರ್ಥ (Engagement) ನೆರವೇರಿತ್ತು. ಇಬ್ಬರೂ ಶೀಘ್ರದಲ್ಲೇ ಮದುವೆಯಾಗಬೇಕಿತ್ತು.
ಶಬೀಲ್, ಜೋಯಾಳನ್ನು ಡಿಜೆ ಹಳ್ಳಿಯ ಸಕ್ಕರೆ ಮಂಡಿ ಏರಿಯಾದಲ್ಲಿರುವ ತನ್ನ ಕುಟುಂಬಕ್ಕೆ ಸೇರಿದ ಪಾಳು ಬಿದ್ದ ಮನೆಗೆ ಕರೆತಂದಿದ್ದಾನೆ. ಪಾಳು ಬಿದ್ದ ಮನೆಯಲ್ಲಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಜಗಳ ನಡೆದಿದೆ ಎನ್ನಲಾಗುತ್ತಿದೆ.
ಈ ವೇಳೆ ಆಕ್ರೋಶಗೊಂಡ ಶಬೀಲ್, ತನ್ನ ಬಳಿಯಿದ್ದ ಆಯುಧದಿಂದ ಜೋಯಾಳ ಕತ್ತನ್ನು ಸೀಳಿ ಬರ್ಬರವಾಗಿಯೇ ಕೊಲೆ ಮಾಡಿದ್ದಾನೆ. ಕೇವಲ ಅರ್ಧ ಗಂಟೆಯ ಅವಧಿಯಲ್ಲಿ ಈ ಕೃತ್ಯ ಎಸಗಿದ ಆರೋಪಿ ಶಬೀಲ್, ಅಲ್ಲಿಂದ ಪರಾರಿಯಾಗಿದ್ದಾನೆ. ಬೆಳಿಗ್ಗೆ 6:30ರ ಸುಮಾರಿಗೆ ಆರೋಪಿ ಶಬೀಲ್ ಕುಟುಂಬಸ್ಥರು ಆ ಪಾಳು ಬಿದ್ದ ಮನೆಗೆ ಬಂದಾಗ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಡಿಜೆ ಹಳ್ಳಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ..

