ನಿನ್ನಿಕಲ್ಲು ಪಾದೆ – ಕಾಲ ನಿರ್ಣಯದ ಶ್ರೀಚಕ್ರ ಸಾನ್ನಿಧ್ಯ

0
14

ಜಾಗತಿಕ ಪ್ರಾಕೃತಿಕ ಪಾರಂಪರಿಕ ಅಧ್ಯಯನ, ಧ್ಯಾನ ಹಾಗೂ ಆರಾಧನಾ ಕೇಂದ್ರ ಸ್ಥಾಪನೆಗೆ ಒಪ್ಪಿಗೆ

ನಂದಿಕೂರು:ತುಳುನಾಡಿನ ಅಪೂರ್ವ ಪವಿತ್ರ ಸಾನ್ನಿಧ್ಯವಾಗಿರುವ ನಿನ್ನಿಕಲ್ಲು ಪಾದೆಯ ಐತಿಹಾಸಿಕ ಹಿನ್ನೆಲೆಯ ಕುರಿತು ನಡೆದ ತಾಂಬೂಲ ಪ್ರಶ್ನೆಯಲ್ಲಿ ಮಹತ್ವದ ವಿಚಾರಗಳು ಬೆಳಕಿಗೆ ಬಂದಿದ್ದು, ಈ ಸ್ಥಳವನ್ನು ಜಾಗತಿಕ ಮಟ್ಟದ ಪ್ರಾಕೃತಿಕ ಪಾರಂಪರಿಕ ಅಧ್ಯಯನ, ಧ್ಯಾನ ಹಾಗೂ ಆರಾಧನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಪ್ರಶ್ನೆ ಚಿಂತನೆಯಲ್ಲಿ ಸಂಪೂರ್ಣ ಒಪ್ಪಿಗೆ ವ್ಯಕ್ತವಾಗಿದೆ.

ಪ್ರಶ್ನೆ ಚಿಂತನಾ ಫಲಿತಾಂಶದ ಪ್ರಕಾರ, ನಿನ್ನಿಕಲ್ಲು ಪಾದೆ ಪ್ರಾಕೃತಿಕವಾಗಿ ಶ್ರೀಚಕ್ರ ನೆಲೆಗೊಂಡ ಪವಿತ್ರ ಕ್ಷೇತ್ರವಾಗಿದ್ದು, ಭೂಮಿ ಉಂಟಾದಾಗಲೇ ಸಹಜವಾಗಿ ರೂಪುಗೊಂಡ ಆಲಯವೆಂದು ಅಭಿಪ್ರಾಯ ವ್ಯಕ್ತವಾಗಿದೆ. ಈ ಪ್ರದೇಶವು ತುಳುನಾಡಿನ ಪಂಚಭೂತ, ಪಂಚತತ್ವ ಹಾಗೂ ಪಂಚಶಕ್ತಿಗಳ ನೆಲೆಯಾಗಿದ್ದು, ಇದರ ಕಾಲ ನಿರ್ಣಯ ಸಾಧ್ಯವಿಲ್ಲದಷ್ಟು ಪ್ರಾಚೀನವಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಪಾಪನಾಶಿನಿ ನದಿ ಹರಿಯುತ್ತಿದ್ದು, ಇಂದಿಗೂ ಅದು ಭೂಗರ್ಭದಲ್ಲಿ ಅಗೋಚರವಾಗಿ ಹರಿಯುತ್ತಿದೆ ಎಂಬ ನಂಬಿಕೆ ಇದೆ. ಪ್ರಧಾನ ದೇವತೆಯಾಗಿ ತುಳುವೇಶ್ವರಿ ಆರಾಧಿಸಲ್ಪಟ್ಟಿದ್ದು, ಇಂದಿಗೂ ಹಲವರು ಗುಪ್ತವಾಗಿ ಆರಾಧನೆ ನಡೆಸುತ್ತಿದ್ದಾರೆ. ಇತ್ತೀಚಿನ ಕಾಲದಲ್ಲಿ ಈ ದೇವಿಯನ್ನು ಖಡ್ಗೇಶ್ವರಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ.

ಇಲ್ಲಿನ ವೈಶಿಷ್ಟ್ಯಗಳಲ್ಲಿ ಸೌರಮಾನ ಹಾಗೂ ಚಂದ್ರಮಾನ ಕಾಲಗಣನೆಗಳ ಬಳಕೆ ಮಾತ್ರವಲ್ಲದೆ, ಸಮಯದ ಆವಿಷ್ಕಾರ, ಗಡಿಯಾರ, ಪಂಚಾಂಗ ಹಾಗೂ ಕ್ಯಾಲೆಂಡರ್ ಪದ್ಧತಿಗಳ ಮೂಲಾಭಿವೃದ್ಧಿಯೂ ಈ ಪ್ರದೇಶದೊಂದಿಗೆ ಸಂಬಂಧ ಹೊಂದಿದೆ ಎಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ. ತುಳುನಾಡಿನ ಪ್ರಾಚೀನ ವಿದ್ಯೆಗಳು ಹಾಗೂ ಜ್ಯೋತಿಷ್ಯ ಶಾಸ್ತ್ರದ ಮೂಲಗಳು ಈ ಮಣ್ಣಿನಲ್ಲಿ ಆವಿಷ್ಕಾರಗೊಂಡಿವೆ.
ಇದಲ್ಲದೆ, ಶಾಸ್ತ್ರ ಮತ್ತು ಶಸ್ತ್ರ ವಿದ್ಯೆಗಳು, ಕಳರಿ ಪರಂಪರೆಗಳು ಈ ಮಣ್ಣಿನಲ್ಲಿ ವ್ಯಾಪಕವಾಗಿ ಸಂಶೋಧನೆಗೊಂಡಿದ್ದು, ನಾಥ ಪಂಥದ ನವ ನಾಥರ ಶಕ್ತಿಕೇಂದ್ರವೂ ಇದೇ ಪ್ರದೇಶವಾಗಿತ್ತು ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಜಗತ್ತಿನಾದ್ಯಂತ ಹರಡಿದ್ದ ಅನೇಕ ಜ್ಞಾನ ಪರಂಪರೆಗಳ ಮೂಲವೂ ಈ ಪವಿತ್ರ ಭೂಮಿಯೊಂದಿಗೇ ಸಂಬಂಧ ಹೊಂದಿದೆ ಎಂದು ವ್ಯಕ್ತವಾಯಿತು. ಇದು ಬರಿ ಕಲ್ಲು ಬಂಡೆಗಳಲ್ಲ; ತುಳು ನಾಡಿನ ಆತ್ಮ ನಿರ್ಭರತೆಗೆ ಸಾಕ್ಷಿ ಎಂಬುದು ಪ್ರಶ್ನೆ ಚಿಂತನೆಯಲ್ಲಿ ಸ್ಪಷ್ಟವಾಯಿತು.

ಈ ಪ್ರದೇಶಗಳಲ್ಲಿ ಪವಿತ್ರ ತೀರ್ಥಭಾವಿ, ಹನುಮಂತನ ಪಾದಸ್ಪರ್ಶ, ಬೆರ್ಮೆರೆ ಆಲಡೆ ಮತ್ತು ಇತರ ದೈವ ದೇವರುಗಳ ಸಾನಿಧ್ಯ ಮತ್ತು ಪೌರಾಣಿಕ – ಜನಪದ ಇತಿಹಾಸದ ಸಾಕ್ಷ್ಯಗಳೂ ಇರುವುದಾಗಿ ತಿಳಿದು ಬಂದಿದೆ.
ಈ ಸ್ಥಳದಲ್ಲಿ ಅನೇಕ ಋಷಿ–ಮುನಿಗಳು, ಸಾಧಕರು ಧ್ಯಾನ – ಸಾಧನೆ ನಡೆಸಿದ್ದು, ಇಂದಿಗೂ ಗುಪ್ತವಾಗಿ ಸಾಧಕರು ಬಂದು ಧ್ಯಾನ ಮಾಡುತ್ತಿದ್ದಾರೆಂದು ಸ್ಥಳೀಯರ ನಂಬಿಕೆ. ಪ್ರಾಕೃತಿಕವಾಗಿ ಕಲ್ಲುಗಳಲ್ಲಿ ದೈವಸಾನ್ನಿಧ್ಯ ಇರುವುದರಿಂದ ಇಲ್ಲಿ ಪ್ರತ್ಯೇಕ ದೇವಾಲಯಗಳ ಅವಶ್ಯಕತೆ ಇಲ್ಲವೆಂದು ಪ್ರತಿ ಕಲ್ಲುಗಳು ದೈವಿ ಸಾದೃಶವಾಗಿದೆ ಎಂದು ವ್ಯಕ್ತವಾಗಿದೆ. ಇಲ್ಲಿ ಪ್ರಾರ್ಥನೆ ಮಾಡಿದವರಿಗೆ ಭಯ ನಿವಾರಣೆ ಶತ್ರು ನಿವಾರಣೆ ಹಾಗೂ ಇಷ್ಟಾರ್ಥ ಸಿದ್ಧಿ ಸಂಭವಿಸುತ್ತದೆ ಎಂಬ ನಂಬಿಕೆ ಇದ್ದು ಬಪ್ಪನಾಡು ಕ್ಷೇತ್ರದಲ್ಲಿ ಇದೇ ಪಂಚ ದುರ್ಗೆಯರ ಸಾನಿಧ್ಯ ಇರುವುದಾಗಿ ವ್ಯಕ್ತವಾಯಿತು.

ಪ್ರಾಚೀನ ಕಾಲದಲ್ಲಿ
ಈ ಪ್ರದೇಶದಲ್ಲಿ ಅಪೂರ್ವ ನಿಧಿ ಶೇಖರಣೆಗಳಿದ್ದು, ಅವನ್ನು ಅಪಹರಿಸಲು ಇಲ್ಲಿದ್ದ ನಾಗಯಕ್ಷಿಯನ್ನು ಬಂಧನ ಮಾಡಲಾಗಿದೆ ಎಂಬ ವಿಚಾರವೂ ಪ್ರಶ್ನೆ ಚಿಂತನೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ನಾಗಶಕ್ತಿಯ ವಿಮೋಚನೆ ಹಾಗೂ ಸ್ಥಳದಲ್ಲಿರುವ ಶಿಲಾಸಾನ್ನಿಧ್ಯಗಳ ದೈವಿಕ ಗುರುತ್ವ ಮತ್ತು ಸಂಕಲ್ಪ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.ಈ ಪವಿತ್ರ ಭೂಮಿಯ ಕುರಿತು ಮುಂದಿನ ವಿಮರ್ಶೆ ಮತ್ತು ಚಿಂತನೆಗಳನ್ನು ಮುಂದುವರಿಸಲು ನವಂಬರ್ 2, 3, 4ರಂದು 3 ದಿನಗಳ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಲು ತೀರ್ಮಾನಿಸಲಾಯಿತು.

ಈ ಕಾರ್ಯಕ್ರಮವನ್ನು ಖ್ಯಾತ ಜ್ಯೋತಿಷಿಗಳಾದ ಶಶಿಧರ ಮಾಂಞಾಡ್ ಮತ್ತು ಸೂರಜ್ ಕೆ. ಪಿ. ನಡೆಸಿ ಕೊಟ್ಟರು ಮತ್ತು ಕಾಸರಗೋಡು ತುಳುವೆರೆ ಆಯನಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ವಾಂತಿಚಾಲ್ ಭಾಷಾಂತರ ಮಾಡಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಎನ್ ಮಧ್ವರಾಯ ಭಟ್, ಡಾ. ವೈ. ಎನ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ನಾಗರಾಜ್ ಭಟ್, ಸುರೇಶ್ ಆಚಾರ್ಯ, ಉದಯ ರೈ, ಕಿರಣ್ ಚೌಟ, ಪ್ರಮೋದ್ ಸಪ್ರೆ, ಮಾಧವ ಉಳ್ಳಾಲ್, ಕೃಷ್ಣಮೂರ್ತಿ ರಾವ್ ಪಾದೆಬೆಟ್ಟು, ಡಾ. ರಾಜೇಶ್ ಆಳ್ವ, ಅರವಿಂದ ಬೆಳ್ಚಾಡ ಹರಿಪ್ರಸಾದ್ ರೈ ಜಿ.ಕೆ, ರವಿಕುಮಾರ್, ಗಣೇಶ್, ನಾಗೇಶ್ ಭಂಡಾರಿ, ಮೊದಲಾದವರು ಈ ಕಾರ್ಯಕ್ರಮದಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು.

ತುಳುವ ಮಹಾಸಭೆಯ ಸಂಚಾಲಕರಾದ ವಸಂತ ರೈ ಸೂರಿಂಜೆ, ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಶಾಂತ್ ಶೆಟ್ಟಿ, ಪ್ರವೀಣ್ ಕಂದಾವರ, ಡಾ. ಆವೀನ್ ಆಳ್ವ, ಉತ್ತಮ್ ಸಿಂಗ್, ಜ್ಯೋತಿ ಶೆಟ್ಟಿ ಹಾಗೂ ಸ್ಥಳೀಯರು ಮತ್ತಿತರ ಗಣ್ಯರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡು ನಿನ್ನಿಕಲ್ಲು ಪಾದೆಯ ಮುಂದಿನ ಬೆಳವಣಿಗೆಗೆ ಒಕ್ಕೊರಲ ಧ್ವನಿಯಾದರು. ಬಂದ ಭಕ್ತರಿಗೆ ಊಟೋಪಚಾರ ಮತ್ತು ಫಲಹಾರ ವ್ಯವಸ್ಥೆಯನ್ನು ಕಿರಣ್ ಚೌಟ ಮತ್ತು ಬಳಗದವರು ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯೊಂದಿಗೆ ತಾಂಬೂಲ ಪ್ರಶ್ನೆ ಕಾರ್ಯಕ್ರಮವನ್ನು ಸಮಾಪನಗೊಳಿಸಲಾಯಿತು.

ತುಳುವರ್ಲ್ಡ್ ಫೌಂಡೇಶನ್ ಆಶಯದಂತೆ, ಜಾಗತಿಕವಾಗಿ ನಿನ್ನಿಕಲ್ಲು ಪಾದೆಯನ್ನು ತುಳುನಾಡಿನ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಜ್ಞಾನಪರಂಪರೆಯ ಪುನರುಜ್ಜೀವನ ಕೇಂದ್ರವಾಗಿ ರೂಪಿಸುವ ಕಾರ್ಯಕ್ಕೆ ಇದೀಗ ಹೊಸ ದಿಕ್ಕು ದೊರೆತಿದೆ.
ನಿನ್ನಿಕಲ್ಲು ಪಾದೆ — ನಮ್ಮ ಮೂಲ ಸಂಸ್ಕೃತಿಯ ದ್ಯೋತಕ.

LEAVE A REPLY

Please enter your comment!
Please enter your name here