ಏ. 01: ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ

0
4

ಕಾರ್ಕಳ: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿ ಗಾಂದಡ್ಪು ಶ್ರೀ ಮಹಾದೇವಿ ದೇವಸ್ಥಾನದಲ್ಲಿ ಮಾ. 30ರ ಸೋಮವಾರದಿಂದ ಏ. 01ರ ಬುಧವಾರದ ಪರ್ಯಂತ ಅನಾದಿಕಾಲದಿಂದಲೂ ಪೂರ್ವಜರು ಆರಾಧಿಸಿಕೊಂಡು ಬಂದಂತಹ ಶ್ರೀ ಮಹಾದೇವಿ ಅಮ್ಮನವರ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ಶ್ರೀ ನಾಗದೇವರ ಪುನಃ ಪ್ರತಿಷ್ಠಾ ಮಹೋತ್ಸವ, ಶ್ರೀ ಅಣ್ಣಪ್ಪ ಸ್ವಾಮಿಯ ಪುನಃ ಪ್ರತಿಷ್ಠಾ ಕಲಶಾಭಿಷೇಕವು ಕಡಂದಲೆ ವೇದಮೂರ್ತಿ ಶ್ರೀ ಸ್ಕಂದ ಭಟ್‌ರವರ ಪೌರೋಹಿತ್ಯದಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕರಾದ ವೇದಮೂರ್ತಿ ಶ್ರೀ ಹರಿನಾರಾಯಣ ಅಸ್ರಣ್ಣರ ಉಪಸ್ಥಿತಿಯಲ್ಲಿ ಸುಗಮಗೊಳ್ಳಲಿರುವುದು ಎಂದು ಕ್ಷೇತ್ರದ ಶ್ರೀ ದೇವಿ ಪಾತ್ರಿ ಹಾಗೂ ವ್ಯವಸ್ಥಾಪಕರಾದ ಶ್ರೀ ಕೇಶವ ಅಂಚನ್‌ರವರು ಮಂಗಳವಾರ ಕ್ಷೇತ್ರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಮಾ. 30ರ ಸೋಮವಾರ ಬೆಳಿಗ್ಗೆ 9 ಗಂಟೆಗೆ ತೋರಣ ಮುಹೂರ್ತ, ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಬಳಿಕ, ರಾತ್ರಿ ಗಂಟೆ 7ರಿಂದ ಸಾರ್ವಜನಿಕ ಅನ್ನಸಂತರ್ಪಣೆ, 7.30ರಿಂದ ಸಭಾ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 8ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿಜಯ ಕುಮಾರ್ ಕೊಡಿಯಾಲ್ ಬೈಲ್ ತಂಡದವರಿಂದ ‘ಶಿವದೂತ ಗುಳಿಗೆ’ ಎಂಬ ಭಕ್ತಿ ಪ್ರಧಾನ ತುಳು ನಾಟಕ ಜರುಗಲಿದೆ.

ಮಾ. 31ರ ಮಂಗಳವಾರ ಬೆಳಿಗ್ಗೆ 9ಕ್ಕೆ ವಿವಿಧ ದೇವತಾ ಕಾರ್ಯಗಳು ಪ್ರಾರಂಭಗೊಂಡು, ಬಳಿಕ ರಾತ್ರಿ ಗಂಟೆ 7ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಕುದ್ರೋಳಿ ಗಣೇಶ್ ಹಾಗೂ ಬಳಗದವರಿಂದ ‘ವಿಸ್ಮಯ ಜಾದೂ’ ವಿನೂತನ ಮ್ಯಾಜಿಕ್ ಪ್ರದರ್ಶನ ನಡೆಯಲಿದೆ.

ಏ. 01ರ ಬುಧವಾರ ಬೆಳಿಗ್ಗೆ ಮೀನಲಗ್ನದಲ್ಲಿ ಶ್ರೀ ದೇವರ ಪ್ರತಿಷ್ಠೆ, ನಾಗದೇವರಿಗೆ ಪಂಚ ವಿಂಶತಿ ಕಲಶಾಧಿವಾಸ, ನಾಗಬಿಂಬ ಪ್ರತಿಷ್ಠೆ, ಆಶ್ಲೇಷಾ ಬಲಿ, ಅಣ್ಣಪ್ಪ ಸ್ವಾಮಿಯ ಪ್ರತಿಷ್ಠೆ ಜರುಗಲಿದೆ. ಬಳಿಕ ಬೆಳಿಗ್ಗೆ 10.30ಕ್ಕೆ ಶ್ರೀ ಮಹಾದೇವಿ ಅಮ್ಮನವರ ದರ್ಶನ ಸೇವೆ, 11ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ ಗಂಟೆ 8ಕ್ಕೆ ಬೆನಕ ಆರ್ಟ್ಸ್ ಕುಡ್ಲ ಇವರಿಂದ ‘ಪೊರಿಪುದಪ್ಪೆ ಜಲದುರ್ಗೆ’ ಎಂಬ ಸಿನಿನಾಟಕ ನಡೆಯಲಿದೆ. ರಾತ್ರಿ ಗಂಟೆ 10ರಿಂದ ಶ್ರೀ ಅಣ್ಣಪ್ಪ ಸ್ವಾಮಿಯ ನೇಮೋತ್ಸವ ಜರುಗಲಿದೆ.

ಏ. 03ರ ಶುಕ್ರವಾರ ಸಂಜೆ 6.30ರಿಂದ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ (ರಿ.) ಸಚ್ಚೇರಿಪೇಟೆ ಇವರಿಂದ ‘ಕಾರ್ಣಿಕದ ಉಳ್ಳಾಲ್ತಿ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಬ್ರಹ್ಮಕಲಶಾಭಿಷೇಕದಂದು ಸುಮಾರು ನಾಲ್ಕು ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಸ್ಥಳೀಯ ಪರಿಸರಗಳಿಂದ ಬಸ್ಸಿನ ವ್ಯವಸ್ಥೆ ಇದೆ ಎಂದು ಶ್ರೀ ಕೇಶವ ಅಂಚನ್ ತಿಳಿಸಿದ್ದಾರೆ.

ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಜಗದೀಶ ಶೆಟ್ಟಿ ಸಚ್ಚರಪರಾರಿ, ಪೊಸ್ರಾಲು ಮುಂಡ್ಕೂರು ಬ್ರಹ್ಮ ಶ್ರೀ ನಾರಾಯಣ ಗುರು ಸಂಘದ ಗೌರವಾಧ್ಯಕ್ಷ ಶ್ರೀಧರ ಸನಿಲ್, ಆದಿಜಾರಾಂದಯ ದೈವಸ್ಥಾನ ಶಿರ್ವ ಇದರ ವ್ಯವಸ್ಥಾಪಕ ತಮ್ಮಣ್ಣ ಪೂಜಾರಿ, ಕಾರ್ಯಕ್ರಮದ ಸಂಯೋಜಕರಾದ ಕೃಷ್ಣ ಸಾಲ್ಯಾನ್ ಸಂಕಲಕರಿಯ ಹಾಗೂ ಶರತ್ ಶೆಟ್ಟಿ ಸಚ್ಚೇರಿಪೇಟೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here