ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ 20 ವರ್ಷದ ಯುವತಿಗೆ ಇನ್‌ಸ್ಟಾಗ್ರಾಮ್ ಮೂಲಕ ಸುಶಾಂತ್ ಪೂಜಾರಿ ಎಂಬಾತನ ಪರಿಚಯವಾಗಿದ್ದು, ಈ ಆರು ತಿಂಗಳ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿದೆ. ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿದ್ದ ಸುಶಾಂತ್, ಆಕೆಯ ನಂಬಿಕೆ ಗಳಿಸಿದ್ದ.
ಪೊಲೀಸರ ಮಾಹಿತಿ ಪ್ರಕಾರ, ಪಿರ್ಯಾದುದಾರರಾದ 20 ವರ್ಷದ ಯುವತಿ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ನಿವಾಸಿಯಾಗಿದ್ದು, ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಆರೋಪಿತ ಸುಶಾಂತ್ ಪೂಜಾರಿ ಇನ್‌ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದಾನೆ ಬಳಿಕ ಇಬ್ಬರ ನಡುವೆ ಸ್ನೇಹ ಪ್ರೀತಿಗೆ ತಿರುಗಿ, ಮದುವೆಯಾಗುವುದಾಗಿ ನಿರ್ಧರಿಸಿದ್ದಾಗಿ ಹೇಳಲಾಗಿದ್ದು, ಈ ನಡುವೆ, ಆರೋಪಿ ಯುವತಿಯನ್ನು ನಗ್ನವಾಗಿ ವಿಡಿಯೋ ಕಾಲ್ ಮಾಡಲು ಒತ್ತಾಯಿಸಿ, ಮದುವೆಯ ಭರವಸೆ ನೀಡಿದ್ದರಿಂದ ಆತನ ಮೇಲಿನ ನಂಬಿಕೆಯಿಂದ ಯುವತಿ ವಿಡಿಯೋ ಕಾಲ್‌ನಲ್ಲಿ ಭಾಗವಹಿಸಿದ್ದಾಳೆ.
ಆದರೆ ಬಳಿಕ ಆರೋಪಿ ಆ ಖಾಸಗಿ ವಿಡಿಯೋವನ್ನು ವಾಟ್ಸಾಪ್ ಮೂಲಕ ಇತರರಿಗೆ ಹಂಚಿದನೆಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿತನ ಸಹೋದರಿಯರೂ ಈ ಕೃತ್ಯಕ್ಕೆ ಸಹಕರಿಸಿದ್ದಾಗಿ ತಿಳಿದುಬಂದಿದೆ.
ಈ ಸಂಬಂಧ ಉಪ್ಪಿನಂಗಡಿ ಪೊಲೀಸರು ಅ.ಕ್ರ: 43/2026ರಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 318(3) , 316(3), 77 ಜೊತೆಗೆ3(5) ಮಾಹಿತಿ ತಂತ್ರಜ್ಞಾನ ಕಾಯ್ದೆಯ 66(E), 67(A) ಹಾಗೂ ಎಸ್‌ಸಿ/ಎಸ್‌ಟಿ ಅಟ್ಟಹಾಸ ತಡೆ ಕಾಯ್ದೆಯ ವಿವಿಧ ವಿಧಿಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೊಲೀಸರು ಆರೋಪಿತರ ಬಂಧನಕ್ಕೆ ಕ್ರಮ ಕೈಗೊಂಡಿದ್ದು, ಮುಂದಿನ ತನಿಖೆ ಮುಂದುವರಿದಿದೆ.

