ಉಡುಪಿ ಶ್ರೀಪುತ್ತಿಗೆ ಕೃಷ್ಣಮಠದ ಮಠದ ಪರ್ಯಾಯ ಶ್ರೀಗಳಾದ ಪರಮಪೂಜ್ಯ ಶ್ರೀಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಅಪೂರ್ವ ಜಾಗತಿಕ ಯೋಜನೆಯಾದ “ಕೋಟಿ ಗೀತಾ ಲೇಖನ ಯಜ್ಞ” ಮತ್ತು ಗೀತಾ ಜಯಂತಿಗಳ ಅಂಗವಾಗಿ ಉಡುಪಿ ಶ್ರೀಕೃಷ್ಣಮಠದಲ್ಲಿ “ಬೃಹತ್ ಗೀತೋತ್ಸವ” ವೆಂಬ ಹೆಸರಿನ , ಒಂದು ತಿಂಗಳ ಪರ್ಯಂತ ನಡೆಯುವ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು,
8 ನವೆಂಬರ್ 2025 ರಂದು ಇದರ ಉದ್ಘಾಟನೆಯು ನಡೆಯಲಿದೆ.
ಅಪರಾಹ್ನ 3.30 ಕ್ಕೆ ರಥಬೀದಿಯ ಶ್ರೀ ಪುತ್ತಿಗೆ ಮಠದಲ್ಲಿ ಸಹಸ್ರ ಕಂಠ ಲಕ್ಷ್ಮೀ ಶೋಭಾನೆ ಪಾರಾಯಣ, ಸಂಜೆ 4.30 ಕ್ಕೆ ಮೆರವಣಿಗೆ ಹಾಗೂ ಸಂಜೆ 5.00 ಗಂಟೆಗೆ ಗೀತೋತ್ಸವದ ಪ್ರಾರಂಭೋತ್ಸವವು ನಡೆಯಲಿದೆ.
ಪರ್ಯಾಯ ಶ್ರೀಗಳು ಹಾಗೂ ಕಿರಿಯ ಶ್ರಿಪಾದರ ದಿವ್ಯೋಪಸ್ಥಿತಿಯಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಪೇಜಾವರ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದು ಮುಖ್ಯ ಅತಿಥಿಗಳಾಗಿ ಮಣಿಪಾಲ ಮೀಡಿಯಾ ಸಮೂಹದ ಆಡಳಿತ ನಿರ್ದೇಶಕರಾದ ಶ್ರೀ ಸತೀಶ್ ಪೈ ಹಾಗೂ ಹಲವು ಗಣ್ಯರು ಉಪಸ್ಥಿತರಿರುವರು.
ಸಾರ್ವಕಾಲಿಕವಾದ ಭಗವದ್ಗೀತೆಯ ದಿವ್ಯ ಚಿಂತನೆ ಹಾಗೂ ಪ್ರಾಚೀನ ಮೌಲ್ಯಗಳ ಸಂದೇಶ ವನ್ನು ಸರ್ವರಿಗೂ ತಲುಪಿಸಲು, ತನ್ಮೂಲಕ ಲೋಕಕಲ್ಯಾಣದ ಉದ್ದೇಶದಿಂದ ನಡೆಸುವ “ಬೃಹತ್ ಗೀತೋತ್ಸವ” ವು ನವೆಂಬರ್ 8 ರಿಂದ ಡಿಸೆಂಬರ್ 7 ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ರಾಜ್ಯ-ದೇಶದ ಹಲವು ಅಗ್ರಗಣ್ಯ ಸಂತರ ಪಾಲ್ಗೊಳ್ಳುವಿಕೆಯೊಂದಿಗೆ ವಿವಿಧ ಧಾರ್ಮಿಕ, ಯಕ್ಷಗಾನ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಶ್ರೇಷ್ಠ ವಿದ್ವಾಂಸರಿಂದ ವಿದ್ವತ್ ಗೋಷ್ಠಿ-ವಿಚಾರ ಸಂಕಿರಣ, ಗೀತಾ ಮಹಾಯಾಗ, ಅಂತಾರಾಷ್ಟ್ರೀಯ ಗೀತಾ ಸಮ್ಮೇಳನ, ವಿವಿಧ ಧಾರ್ಮಿಕ ಮುಖಂಡರಿಗೆ ಸನ್ಮಾನಗಳು ನಡೆಯಲಿದ್ದು, ನವೆಂಬರ್ 28 ರಂದು ಇದರ ಪ್ರಮುಖ ಕಾರ್ಯಕ್ರಮ “ಲಕ್ಷ ಕಂಠ ಗೀತಾ” –1 ಲಕ್ಷ ಜನರಿಂದ ಏಕಕಾಲದಲ್ಲಿ ಭಗವದ್ಗೀತೆಯ ಪಠಣ ನಡೆಯಲಿದ್ದು ಭಾರತದ ಸನ್ಮಾನ್ಯ ಪ್ರಧಾನಮಂತ್ರಿಗಳದ ಶ್ರಿ ನರೇಂದ್ರ ಮೋದಿಯವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.

