ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಮಂಗಳೂರು ನಗರದಲ್ಲಿ ತ್ಯಾಜ್ಯ ನಿರ್ವಹಣೆ ಹಾಗೂ ಸಂಚಾರ ವ್ಯವಸ್ಥೆ ದಿನದಿಂದ ದಿನಕ್ಕೆ ಗಂಭೀರ ಸವಾಲಾಗಿ ಪರಿಣಮಿಸುತ್ತಿದೆ. ನಗರ ವಿಸ್ತರಣೆ, ಜನಸಂಖ್ಯೆ ಹೆಚ್ಚಳ ಹಾಗೂ ವಾಹನಗಳ ಸಂಖ್ಯೆಯ ಹೆಚ್ಚಳದಿಂದ ಈ ಸಮಸ್ಯೆಗಳು ಇನ್ನಷ್ಟು ಸಂಕೀರ್ಣವಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ತಾತ್ಕಾಲಿಕ ಪರಿಹಾರಗಳಿಗಿಂತ ದೀರ್ಘಕಾಲಿಕ, ಶಾಶ್ವತ ಹಾಗೂ ವ್ಯವಸ್ಥಿತ ಪರಿಹಾರಗಳು ಅತ್ಯಾವಶ್ಯಕವಾಗಿವೆ.
ಈ ಹಿನ್ನೆಲೆ, ಜಿಲ್ಲಾಡಳಿತ, ಮಂಗಳೂರು ಮಹಾನಗರ ಪಾಲಿಕೆ, ಸಂಚಾರ ಪೊಲೀಸ್, ರೈಲ್ವೆ ಇಲಾಖೆ ಹಾಗೂ ಇತರ ಸಂಬಂಧಪಟ್ಟ ಇಲಾಖೆಗಳ ಸಮನ್ವಯದೊಂದಿಗೆ ಒಂದು ವಿಶೇಷ ತ್ಯಾಜ್ಯ ಮತ್ತು ಸಂಚಾರ ನಿರ್ವಹಣಾ ಕಾರ್ಯಪಡೆ (Task.Force) ರಚಿಸುವ ಅಗತ್ಯವಿದೆ. ಇಂತಹ ಕಾರ್ಯಪಡೆ ಯೋಜನೆಗಳನ್ನು ರೂಪಿಸುವುದು, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ನಿರಂತರ ಮೇಲ್ವಿಚಾರಣೆ ಮಾಡುವುದು ಹಾಗೂ ಸಾರ್ವಜನಿಕರನ್ನು ಸಕ್ರಿಯವಾಗಿ ಒಳಗೊಳ್ಳಿಸುವಲ್ಲಿ ಮಹತ್ವದ ಪಾತ್ರ ವಹಿಸಬಹುದು. ಈ ವಿಷಯದ ಮಹತ್ವವನ್ನು ಮನಗಂಡು, ಈಗಾಗಲೇ ಮಾನ್ಯ ಜಿಲ್ಲಾಧಿಕಾರಿ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರ ಪೊಲೀಸ್, ದಕ್ಷಿಣ ಕನ್ನಡ ಜಿಲ್ಲೆಯ ಗೌರವಾನ್ವಿತ ಸಂಸದರು, ಜಿಲ್ಲೆಯ ಉಸ್ತುವಾರಿ ಸಚಿವರು, ಕರ್ನಾಟಕ ವಿಧಾನಸಭಾಧ್ಯಕ್ಷರು, ಕರ್ನಾಟಕ ವಿಧಾನಸಭಾ ಶಾಸಕರುಗಳು ಹಾಗೂ ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರುಗಳಿಗೆ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಮನವಿಯನ್ನು ಸಲ್ಲಿಸಲಾಗಿದೆ.
ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ಕಳೆದ ಹಲವು ವರ್ಷಗಳಿಂದ ಸ್ವಚ್ಛತೆ, ಪರಿಸರ ಸಂರಕ್ಷಣೆ ಹಾಗೂ ಸಾರ್ವಜನಿಕ ಜಾಗೃತಿ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸರ್ಕಾರಿ ಇಲಾಖೆಗಳು ಮತ್ತು ನಾಗರಿಕರ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ.
2015ರಲ್ಲಿ ಪ್ರಾರಂಭಗೊಂಡ ಶ್ರೀ ಅಂಬಾಮಹೇಶ್ವರಿ ಕ್ಷೇಮಾಭಿವೃದ್ಧಿ ಸಂಘದ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡಲಾಗಿದ್ದು, ಕಳೆದ ಹತ್ತು ವರ್ಷಗಳಿಂದ ಮಂಗಳೂರು ನಗರದಲ್ಲಿ ವ್ಯವಸ್ಥಿತ ತ್ಯಾಜ್ಯ ನಿರ್ವಹಣೆ ಹಾಗೂ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳೊಂದಿಗೆ ಕೈಜೋಡಿಸಿ ಸೇವೆ ಸಲ್ಲಿಸಲಾಗುತ್ತಿದೆ. ಈ ಅನುಭವದ ಆಧಾರದಲ್ಲಿ, ಈ ಕಾರ್ಯವನ್ನು ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ವಾರ್ಡುಗಳಿಗೆ ಜನರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವಿಸ್ತರಿಸುವ ಉದ್ದೇಶದಿಂದ “ಅವೇಕ್ ಕುಡ್ಲ” ಎಂಬ ಪರಿಕಲ್ಪನೆಯನ್ನು ರೂಪಿಸಲಾಗಿದೆ. ಈ ಪರಿಕಲ್ಪನೆಗೆ ಮಾನ್ಯ ಮುಲ್ಲೈ ಮುಹಿಲನ್, ಹಿಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅವರು ದಿನಾಂಕ 04-04-2025 ರಂದು ಚಾಲನೆ ನೀಡಿದರು.
ಅವೇಕ್ ಕುಡ್ಲ ಪರಿಕಲ್ಪನೆಯಡಿಯಲ್ಲಿ ತ್ಯಾಜ್ಯ ಮತ್ತು ಸಂಚಾರ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಿ, ಜನರು ನೇರವಾಗಿ “ಅವೇಕ್ ಕುಡ್ಲ ಆ್ಯಪ್” ಮೂಲಕ ಅವುಗಳನ್ನು ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ದಾಖಲಾಗುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಸಹಯೋಗ ಮತ್ತು ಸ್ಥಳೀಯ ನಾಗರಿಕರ ಸಕ್ರಿಯ ಭಾಗವಹಿಸುವಿಕೆಯಿಂದ “ಅಧ್ಯಯನ – ಜಾಗೃತಿ – ಮೇಲ್ವಿಚಾರಣೆ – ಸಮನ್ವಯ – ಅನುಸರಣೆ” ಎಂಬ ಪಂಚತತ್ವದ ಆಧಾರದಲ್ಲಿ ಪರಿಹರಿಸಲಾಗುತ್ತಿದೆ. ನಗರದ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು, ತ್ಯಾಜ್ಯ ಹಾಗೂ ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಉದ್ದೇಶದಿಂದ ವಿಶೇಷ ಕಾರ್ಯಪಡೆ ರಚನೆಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಮತ್ತು ಜನಪ್ರತಿನಿಧಿಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕೆಂಬುದು ಟ್ರಸ್ಟ್ನ ಮನವಿ. ಇಂತಹ ಸಮನ್ವಿತ ವ್ಯವಸ್ಥೆಯ ಮೂಲಕ ಮಾತ್ರ ಮಂಗಳೂರು ನಗರವನ್ನು ಸ್ವಚ್ಛ, ಸುರಕ್ಷಿತ ಹಾಗೂ ಸುಸ್ಥಿರ ನಗರವನ್ನಾಗಿ ರೂಪಿಸಬಹುದು.
ಇದರ ಭಾಗವಾಗಿ, ಟ್ರಸ್ಟ್ ವತಿಯಿಂದ ಹೊಯ್ಗೆ ಬಜಾರ್ ವಾರ್ಡಿನ ಅಂಬಾನಗರದ ಮುಳಿಹಿತ್ಲು ಪ್ರದೇಶದಲ್ಲಿ “1000 ಮನೆಗಳ ಪ್ರಾಯೋಗಿಕ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ ಯೋಜನೆ” ಯನ್ನು ಮಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಪ್ರಾರಂಭಿಸಲಿದ್ದೇವೆ. ಪಾಲಿಕೆಯ ವತಿಯಿಂದ ಅಧಿಕೃತ ನಿರ್ದೇಶನಕ್ಕಾಗಿ ಕಾಯುತ್ತಿದ್ದು, ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಮೇಲ್ವಿಚಾರಣೆಯಲ್ಲಿ ಈ ಯೋಜನೆ ಶೀಘ್ರದಲ್ಲಿ ಕಾರ್ಯ ಆರಂಭಿಸಲಿದೆ. ಪ್ರದೇಶದ ಒಣ ತ್ಯಾಜ್ಯವನ್ನು ಬೇರ್ಪಡಿಸಿ ಪಾಲಿಕೆ ನಿರ್ದೇಶನದಂತೆ ವಿಲೇವಾರಿಗೆ ಕ್ರಮ ವಹಿಸಲಾಗುತ್ತದೆ. ಒಣ ತ್ಯಾಜ್ಯ ಪಚ್ಚನಾಡಿಗೆ ತಲುಪುವ ಮುನ್ನವೇ ವಾರ್ಡ್ ಮಟ್ಟದಲ್ಲಿ ಸಂಸ್ಕರಣೆಯಾಗಬೇಕು ಎಂಬ ಉದ್ದೇಶವನ್ನು ಈ ಯೋಜನೆ ಹೊಂದಿದೆ.
