ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಇಂದು ಉಡುಪಿ ಯ ಅಜ್ಜರಕಾಡಿನಲ್ಲಿರುವ ಅಕಾಶವಾಣಿ ಎಫ್.ಎಮ್. ಪ್ರಸಾರ ಕೇಂದ್ರಕ್ಕೆ ಭೇಟಿ ನೀಡಿದರು. ನೂತನವಾಗಿ ಮಂಜೂರಾಗಿರುವ 1KW FM Transmitter ಕಾಮಗಾರಿ ಹಾಗೂ ಶೀಘ್ರದಲ್ಲಿ ಕಾರ್ಯಾರಂಭ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಮಂಗಳೂರಿನಿಂದ ಕಾರ್ಯಕ್ರಮ ಪ್ರಸಾರ ಹಾಗೂ ಬ್ರಹ್ಮಾವರ ಆಕಾಶವಾಣಿಯ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ವಿ. ಪ್ರಶಾಂತ್ ಕುಮಾರ್, ಸಹಾಯಕ ಅಭಿಯಂತರ ಬಾಬು ಪಟುವತಿ, ಪ್ರಸಾರ ನಿರ್ವಾಹಕ ಲತೀಶ್ ಪಾಲ್ದಾನೆ ಹಾಗೂ ತಾಂತ್ರಿಕ ವಿಭಾಗದ ಮುಖ್ಯಸ್ಥ ಅನಿಲ್ ರೈ ಮೊದಲಾದವರು ಉಪಸ್ಥಿತರಿದ್ದರು.
ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ” ಉಡುಪಿ ಜಿಲ್ಲೆಗೆ ಮೂರು FM ಪ್ರಸಾರ ಕೇಂದ್ರಕ್ಕೆ ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು, ಅದರಲ್ಲಿ ಒಂದು ಕೇಂದ್ರಕ್ಕೆ ಮಂಜೂರಾತಿ ದೊರಕಿದ್ದು, ಫೆಬ್ರವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಕಾರ್ಯಾರಂಭ ಮಾಡುವ ಬಗ್ಗೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಬೆಂಗಳೂರು ಆಕಾಶವಾಣಿಯ ಮೂಲಕ ಕಾರ್ಯಕ್ರಮಗಳು ಮರುಪ್ರಸಾರವಾಗುತ್ತಿದ್ದು, ಸ್ಥಳೀಯ ಪ್ತತಿಭೆಗಳಿಗೆ ಅವಕಾಶ ಒದಗಿಸುವ ಉದ್ದೇಶದಿಂದ, ಅದನ್ನು ಮಂಗಳೂರು ಅಕಾಶವಾಣಿಯ ಮೂಲಕ ಪ್ರಸಾರ ಮಾಡುವ ಕುರಿತು ಬೇಡಿಕೆಯಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಸಾರ ಭಾರತಿಗೆ ಬೇಡಿಕೆ ಸಲ್ಲಿಸಲಾಗುವುದು. ಬ್ರಹ್ಮಾವರ ಆಕಾಶವಾಣಿಯನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

