ವರದಕ್ಷಿಣ ಕಿರುಕುಳಕ್ಕೆ ನೊಂದು – ಬೆಂಕಿ ಹಚ್ಚಿಕೊಂಡು ಗರ್ಭಿಣಿ ಆತ್ಮಹತ್ಯೆ

0
86

ರಾಮನಗರ : ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಐದು ತಿಂಗಳ ಗರ್ಭಿಣಿಯೊಬ್ಬರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ನಯನ (20) ಮೃತರು. ಘಟನೆಗೆ ಸಂಬಂಧಿಸಿದಂತೆ ನಯನ ಪತಿ ನಾಗರಾಜು, ಅತ್ತೆ ಹೇಮಾ ಹಾಗೂ ಮಾವ ಜಯರಾಮು ವಿರುದ್ಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಾರೋಹಳ್ಳಿ ತಾಲ್ಲೂಕಿನ ಲಿಂಗೇಗೌಡನದೊಡ್ಡಿಯ ನಯನ, 11 ತಿಂಗಳ ಹಿಂದೆ ನಾಗರಾಜು ಅವರನ್ನು ಮದುವೆಯಾಗಿದ್ದರು. ಆರಂಭದಲ್ಲಿ ದಂಪತಿ ಅನ್ಯೋನ್ಯವಾಗಿದ್ದರು. ನಂತರ ನಾಗರಾಜು ಮನೆಯವರು, ನಯನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ನಯನ ಚಿಕ್ಕಮ್ಮ ಶಶಿಕಲಾ ಆರೋಪಿಸಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪತಿ ಮನೆಯವರ ಕಿರುಕುಳ ಕುರಿತು ಕುಟುಂಬದಲ್ಲಿ ನಡೆಯುತ್ತಿದ್ದ ಜಗಳಕ್ಕೆ ಬೇಸತ್ತು ಒಮ್ಮೆ ನಯನ ಮನೆ ಬಿಟ್ಟು ಹೋಗಿದ್ದರು. ಆಗ ಪತ್ನಿ ಕಾಣೆಯಾಗಿರುವ ಕುರಿತು ನಾಗರಾಜು ಮಹಿಳಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು. ಮಾರನೇಯ ದಿನ ಪತ್ತೆಯಾಗಿದ್ದ ನಯನ ಅವರನ್ನು ನಾಗರಾಜು ತವರಿಗೆ ಕರೆದೊಯ್ದು ಬಿಟ್ಟಿದ್ದರು. ವಾರದ ಬಳಿಕ ನಯನ ಪತಿ ಮನೆಗೆ ಬಂದಿದ್ದರು.

ಘಟನೆ ನಡೆದ ದಿನವಾದ ಬುಧವಾರ ಮಧ್ಯಾಹ್ನ ಶಶಿಕಲಾ ಅವರಿಗೆ ನಯನ ಕರೆ ಮಾಡಿ, ಮದುವೆ ಪ್ರಮಾಣಪತ್ರ ಮಾಡಿಸಲು ಅಂಕಪಟ್ಟಿ ಸೇರಿದಂತೆ ಕೆಲ ದಾಖಲೆಗಳನ್ನು ಕಳಿಸುವಂತೆ ಹೇಳಿದ್ದರು. ಅದೇ ರಾತ್ರಿ 8.30ರ ಸುಮಾರಿಗೆ ಶಶಿಕಲಾ ಅವರಿಗೆ ಕರೆ ಮಾಡಿದ್ದ ನಾಗರಾಜು, ನಿಮ್ಮ ಮಗಳು ಬೆಂಕಿ ಹಚ್ಚಿಕೊಂಡಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರು. 9 ಗಂಟೆಗೆ ಮನೆಗೆ ಹೋಗಿ ನೋಡಿದಾಗ ತೀವ್ರ ಸುಟ್ಟ ಗಾಯಗಳಿಂದಾಗಿ ನಯನ ಮೃತಪಟ್ಟಿದ್ದರು ಎಂದು ತಿಳಿಸಿದರು.

ರಾತ್ರಿ 7.30ರ ಸುಮಾರಿಗೆ ಮನೆಯಲ್ಲಿ ಜಗಳವಾಗಿದೆ. ಆಗ ನಯನ ಅವರು ಮನೆಯಲ್ಲಿಟ್ಟಿದ್ದ ಡೀಸೆಲ್ ಕ್ಯಾನ್ ಅನ್ನು ತಮ್ಮ ಕೋಣೆಗೆ ತೆಗೆದುಕೊಂಡು ಹೋಗಿ ಮೈ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಗರಾಜು, ಹೇಮಾ ಹಾಗೂ ಜಯರಾಮು ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here