ಕೊಲ್ಲೂರು : ಕಾಲೇಜಿಗೆ ಸರಿಯಾಗಿ ಹೋಗುವಂತೆ ತಂದೆ ಬುದ್ಧಿಮಾತು ಹೇಳಿದ್ದಕ್ಕೆ ಮನನೊಂದ ಡಿಪ್ಲೋಮಾ ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆರಾಡಿ ಗ್ರಾಮದ ಹಯ್ಯಂಗಾರಿನಲ್ಲಿ ನಡೆದಿದೆ. ಹಯ್ಯಂಗಾರು ನಿವಾಸಿ ಮಂಜುನಾಥ ನಾಯ್ಕ ಅವರ ಪುತ್ರ ಮನೀಷ್ (16) ಮೃತಪಟ್ಟ ವಿದ್ಯಾರ್ಥಿ.
ಈತ ಉಡುಪಿಯ ಕೊಳಲಗಿರಿಯ ಜಿ.ಟಿ.ಟಿ.ಸಿ ಕಾಲೇಜಿನಲ್ಲಿ ಡಿಪ್ಲೋಮಾ ವಿದ್ಯಾಭ್ಯಾಸ ಮಾಡುತ್ತಿದ್ದ. ಇತ್ತೀಚೆಗೆ ಮನೀಷ್ ಸರಿಯಾಗಿ ಕಾಲೇಜಿಗೆ ಹೋಗದ್ದಿದ್ದ ಕಾರಣ ತಂದೆ ಮಂಜುನಾಥ ಅವರು, ಮಗನ ಭವಿಷ್ಯದ ದೃಷ್ಟಿಯಿಂದ ಸರಿಯಾಗಿ ಕಾಲೇಜಿಗೆ ಹೋಗುವಂತೆ ಬುದ್ಧಿಮಾತು ಹೇಳಿದ್ದರು.
ತಂದೆಯ ಮಾತಿನಿಂದ ಮನನೊಂದ ಮನೀಷ್, ಫೆಬ್ರವರಿ 16ರಂದು ರಾತ್ರಿ 9:30ರ ಸುಮಾರಿಗೆ ಮನೆಯಲ್ಲಿದ್ದ ಕಳೆ ನಾಶಕದ ವಿಷ ಪದಾರ್ಥ ಸೇವಿಸಿದ್ದು, ಕೂಡಲೇ ಆತನನ್ನು ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಫೆಬ್ರವರಿ 19ರಂದು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಕಳೆದ 14 ದಿನಗಳಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮನೀಷ್, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಈ ಸಂಬಂಧ ಮೃತನ ತಂದೆ ನೀಡಿದ ದೂರಿನ ಮೇರೆಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಕ್ರಮಾಂಕ 03/2026, ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

