ತೆಲಂಗಾಣ: ಅಮ್ಮನ ಜತೆ ಸ್ಕೂಟಿಯಲ್ಲಿ ಕುಳಿತು ಶಾಲೆಗೆ ಹೊರಟಿದ್ದ ಬಾಲಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಬಾಲಕ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಗೀತಾಂಜಲಿ ಇಂಟರ್ನ್ಯಾಷನಲ್ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ ಅಭಿಮಾನ್ಶು ರೆಡ್ಡಿ, ಬೆಳಗ್ಗೆ 8 ಗಂಟೆ ಸುಮಾರಿಗೆ ಸ್ಕೂಟರ್ನಲ್ಲಿ ತನ್ನ ತಾಯಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಪಲ್ಲವಿ ಸ್ಕೂಲ್ ಜಂಕ್ಷನ್ ಬಳಿ ಟಿಪ್ಪರ್ ಅವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ತಕ್ಷಣವೇ ಸಾವನ್ನಪ್ಪಿದ್ದಾನೆ.
ಘಟನೆಯ ವೀಡಿಯೋ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ನಂತರ ತಾಯಿ ಮಗುವನ್ನು ಕಳೆದುಕೊಂಡು ದುಃಖಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಅಭಿಮಾನ್ಶು ಮಲ್ಲಂಪೇಟೆಯ ಆಕಾಶ್ ಲೇಔಟ್ ನಿವಾಸಿ ರಾಜು ಅವರ ಮಗ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.