ಹಾಸನ: ಹಾಸನದ ಪೆನ್ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಷ ಚೇತನ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ ಪೈಶಾಚಿಕ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ ಎಸಗಿದ ಬಳಿಕ ವಿಡಿಯೋವನ್ನು ಸಂತ್ರಸ್ತ ಯುವತಿಯ ಸಹೋದರನಿಗೆ ಕಳಿಸಿ, ನಂತರ ಡಿಲೀಟ್ ಮಾಡಿರುವ ಆರೋಪ ಕೇಳಿಬಂದಿದೆ.
ದುಷ್ಕರ್ಮಿಗಳ ಈ ದುಷ್ಕೃತ್ಯದ ವಿಡಿಯೋ ನೋಡಿ ಸಂತ್ರಸ್ತೆಯ ಕುಟುಂಬ ಬೆಚ್ಚಿಬಿದ್ದಿದೆ. ತಕ್ಷಣವೇ ಯುವತಿಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ, ಅಬ್ದುಲ್ ಅಫ್ತಾಬ್, ರಾಜಿಕ್ ಪಾಷ, ಮತ್ತು ಉಮ್ರಾನ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವಿಡಿಯೋವನ್ನು ಡಿಲೀಟ್ ಮಾಡಿರುವುದರಿಂದ ಸಾಕ್ಷ್ಯಗಳನ್ನು ಸಂಗ್ರಹಿಸುವ ಸವಾಲು ಪೊಲೀಸರ ಮುಂದಿದೆ. ಪ್ರಸ್ತುತ, ಆರೋಪಿಗಳ ಪತ್ತೆಗಾಗಿ ಪೆನ್ಷನ್‌ಮೊಹಲ್ಲಾ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ. ಈ ಘಟನೆ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇತ್ತೀಚಿನ ವರ್ಷಗಳಲ್ಲಿ, ಕರ್ನಾಟಕದಲ್ಲಿ ಸಾಮೂಹಿಕ ಅತ್ಯಾಚಾರದ ಹಲವು ಘಟನೆಗಳು ನಡೆದಿದ್ದು, ಇದು ರಾಜ್ಯಕ್ಕೆ ಆತಂಕ ತಂದಿದೆ. ಕೊಪ್ಪಳದಲ್ಲಿ ವಿದೇಶಿ ಮಹಿಳೆ ಸೇರಿದಂತೆ ಇಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅದೇ ರೀತಿ ಮಂಡ್ಯದಲ್ಲಿ ಸರ್ಕಾರಿ ಶಾಲೆಯ ಆವರಣದಲ್ಲೇ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯೂ ವರದಿಯಾಗಿತ್ತು.