ಕಂದಾಯ ಹಾಗೂ ಗಣಿ ಇಲಾಖೆಯ ಮುಖ್ಯ ಅಧಿಕಾರಿಗಳ ಗೈರು: ಕಲ್ಲಮುಂಡ್ಕೂರು ಗ್ರಾಮಸ್ಥರ ಆಕ್ರೋಶ

0
157

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ಕಲ್ಲಮುಂಡ್ಕೂರು ಗ್ರಾಮಸಭೆ ಆಗಸ್ಟ್ 18ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಪಂಚಾಯತ್ ನ ಒಪ್ಪಿಗೆ ಇಲ್ಲದೆ ಗ್ರಾಮದ ಬೇರೆಬೇರೆ ಪ್ರದೇಶಗಳಲ್ಲಿ ಭೂಮಿಯನ್ನು ಅಗೆಯುತ್ತಿರುವುದನ್ನು ಗ್ರಾಮಸ್ಥರು ಪ್ರತಿಭಟಿಸಿದರು. ಮಾಜಿ ಉಪಾಧ್ಯಕ್ಷ ಸುಂದರ ಪೂಜಾರಿ ಹಾಗೂ ಸುಧಾಕರ್ ಅವರು ಒಂದು ಹಂತದಲ್ಲಿ ತಹಸೀಲ್ದಾರ್ ಕಡ್ಡಾಯವಾಗಿ ಬರಲೇಬೇಕು ಇಲ್ಲದಿದ್ದಲ್ಲಿ ಗ್ರಾಮ ಸಭೆಯಿಂದ ತೆರಳುವದಿಲ್ಲ ಎಂದು ಪ್ರತಿಭಟನೆಗೆ ಇಳಿದರು. ಬೇರೆ ಉಪಾಯ ಕಾಣದೆ ಫೋನಾಯಿಸಿದ ಅಧ್ಯಕ್ಷರು ಕೊನೆಗೆ ರವೆನ್ಯೂ ಇನ್ಸ್ಪೆಕ್ಟರ್ ಅವರನ್ನು ಕರೆಸುವಲ್ಲಿ ಸಫಲರಾದರು.
ಸಭೆಗೆ ಆಗಮಿಸಿದ ರೆವೆನ್ಯೂ ಅಧಿಕಾರಿ ಮಂಜುನಾಥ್ ಅವರು ಗ್ರಾಮಸ್ಥರಲ್ಲಿ ಅಹವಾಲನ್ನು ಲಿಖಿತವಾಗಿ ನೀಡಲು ಕೇಳಿಕೊಂಡರು. ಹಾಗೂ ಹಕ್ಕುಪತ್ರದ ಬೇಡಿಕೆಗಳನ್ನು ಆದಷ್ಟು ಶೀಘ್ರ ಸಮರ್ಪಕಗೊಳಿಸುವ ಭರವಸೆಯನ್ನು ತಹಸೀಲ್ದಾರರ ಪರವಾಗಿ ನೀಡಿದರು.


ಗ್ರಾಮಸ್ಥ ವೀರೇಶ್ ಅವರು ಪಶು ಚಿಕಿತ್ಸಾ ಪರೀಕ್ಷಕ ರಮೇಶ್ ಅವರಲ್ಲಿ ಪಶು ವೈದ್ಯಾಧಿಕಾರಿಯ ನೇಮಕದ ಬಗ್ಗೆ ಪ್ರಶ್ನಿಸಿದರು. ಮೂರು ಗ್ರಾಮದ ಜವಾಬ್ದಾರಿ ಹೊತ್ತಿರುವ ತಾನು ಎರಡು ದಿನಕ್ಕೊಮ್ಮೆ ಪ್ರತಿ ಗ್ರಾಮದಲ್ಲಿ ಲಭ್ಯವಿದ್ದೇನೆ ಎಂದು ತಿಳಿಸಿದರೂ, ಯಾವ ಗ್ರಾಮದಲ್ಲಿ ಯಾವಾಗ ಲಭ್ಯ ಇರುತ್ತಾರೆಂದು ವಿವರಣೆಯನ್ನು ನೀಡಲು ತಯಾರಿರಲಿಲ್ಲ.
ಫೋನ್ ಮೂಲಕ ಸ್ಥಳೀಯ ಭಾಷೆಯಲ್ಲಿಯೇ ಮಾತನಾಡಿ ಮೋಸ ಮಾಡುವ ವ್ಯಕ್ತಿಗಳು ಹೆಚ್ಚಿದ್ದಾರೆ ಆದುದರಿಂದ ಯಾರನ್ನೂ, ಯಾವುದೇ ಸಂಪರ್ಕದ ಲಿಂಕನ್ನು ಮೊಬೈಲ್ ನಲ್ಲಿ ತೆರೆಯುವ ಮೊದಲು ಜಾಗೃತರಾಗಿರಿ. ತಕ್ಷಣದ ಯಾವುದೇ ರೀತಿಯ ಸಹಾಯಕ್ಕೆ 112ಕ್ಕೆ ಪೋನಾಯಿಸಿದರೆ ಪರಿಹಾರ ನೀಡಲಾಗುತ್ತದೆ ಎಂದು ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ರಾಜೇಶ್ ತಿಳಿಸಿದರು. ಅರಣ್ಯ ಇಲಾಖೆಯಿಂದ ರಾಘವೇಂದ್ರ ಶೆಟ್ಟಿ ಕೃಷಿ ಪ್ರೋತ್ಸಾಹಕ ಯೋಜನೆ ಬಗ್ಗೆ ತಿಳಿಸಿದರು.
ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್ ಅವರು ಪ್ರತಿ ವರ್ಷವೂ ಬೆಳೆ ಸಮೀಕ್ಷೆಯ ವಿವರಣೆಯನ್ನು ದಾಖಲಿಸುವಂತೆ ಜನರಲ್ಲಿ ವಿನಂತಿಸಿದರು. ಇಲ್ಲದಿದ್ದಲ್ಲಿ ಇಲಾಖೆಯಿಂದ ದೊರಕುವ ಸಹಾಯಧನವನ್ನು ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ತಿಳಿ ಹೇಳಿದರು. ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಅಧಿಕಾರಿ ವಿಶಾಲಾಕ್ಷಿ ಮಾತನಾಡಿ ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳು ಜಾಗ್ರತವಾಗಿ ಇರಬೇಕಾಗುತ್ತದೆ. ವಿವಿಧ ದಂಧೆಗಳು ಹೆಣ್ಣು ಮಕ್ಕಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಎಚ್ಚರಿಸಿದರು.
ಮೆಸ್ಕಾಂಗೆ ಸಾಕಷ್ಟು ಹಣವನ್ನು ಕಟ್ಟಿದ್ದರೂ, ಅನಗತ್ಯವಾಗಿ ಸಂಪರ್ಕವನ್ನು ಕಡಿತಗೊಳಿಸುವ ಧಮಕಿ ಹಾಕಲಾಗುತ್ತಿದೆ ಎಂದು ಸೆಕ್ಷನ್ ಆಫೀಸರ್ ಕೃಷ್ಣರಾಜ ಅವರ ಮಾತಿನ ಸಂದರ್ಭದಲ್ಲಿ ಗ್ರಾಮಸ್ಥರು ದೂರು ನೀಡಿದರು. ದೂರಿನ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಅಧಿಕಾರಿಯಿಂದ ಕೇಳಿ ಬಂತು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿವೇಣಿ ಮಾತನಾಡಿ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು ಯಾವುದೇ ರೀತಿಯ ಅಹಿತಕರ ಪರಿಣಾಮಗಳು ಗ್ರಾಮದಲ್ಲಿ ಕಂಡು ಬರುತ್ತಿಲ್ಲ, ಪ್ರತೀ ಶಾಲೆ ಹಾಗೂ ಸಂಸ್ಥೆಗಳಿಗೆ ಕಾರ್ಯಕರ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಪ್ರೇಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿಲ್ಮಾ ನಿರ್ಮಲ ಸಲ್ಡಾನ ವರದಿ ಮಂಡಿಸಿ,ಜಮಾ ಖರ್ಚಿನ ವಿವರ ನೀಡಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ವಿದ್ಯಲತಾ, ಆನಂದ, ಸುರೇಖಾ, ಲೀಲಾ, ಕೇಶವಾ, ಆಶಾಲತಾ ಶೆಟ್ಟಿ, ಸುಖಾನಂದ ಶೆಟ್ಟಿ, ಜೆಸಿಂತಾ ಡಿಸೋಜಾ, ಶಕುಂತಲಾ, ಸಂಜೀವ, ಜನಾರ್ಧನ, ಕಲ್ಯಾಣಿ, ಲವೀನಾ ಪ್ರೆಸಿಲ್ಲಾ ಡಿಸೋಜಾ ಉಪಸ್ಥಿತರಿದ್ದರು. ಆಶಾ, ಅಂಗನವಾಡಿ, ಸಂಜೀವಿನಿ ಕಾರ್ಯಕರ್ತೆಯರು ಹಾಜರಿದ್ದರು . ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಶಾಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು

LEAVE A REPLY

Please enter your comment!
Please enter your name here