ಮುಂಬೈ : ಬಾಲಿವುಡ್ ನಟಿ ಆಲಿಯಾ ಭಟ್‌ಗೆ ವಂಚನೆ ಮಾಡಿದ ಪ್ರಕರಣದಲ್ಲಿ ಮಾಜಿ ಆಪ್ತ ಸಹಾಯಕಿಯನ್ನು ಬಂಧಿಸಲಾಗಿದೆ. ಆಲಿಯಾ ಭಟ್‌ಗೆ 77 ಲಕ್ಷ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಮಂಗಳೂರು ಮೂಲಕ ವೇದಿಕಾ ಪ್ರಕಾಶ್ ಶೆಟ್ಟಿಯನ್ನು ಬಂಧಿಸಲಾಗಿದೆ. ಆಲಿಯಾ ಭಟ್ ಅವರ ನಿರ್ಮಾಣ ಕಂಪನಿ ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅವರ ವೈಯಕ್ತಿಕ ಖಾತೆಗಳಲ್ಲಿ 76.9 ಲಕ್ಷ ರೂಪಾಯಿ ಅಕ್ರಮ ಎಸಗಿದ ಆರೋಪವನ್ನು ವೇದಿಕಾ ಪ್ರಕಾಶ್ ಎದುರಿಸುತ್ತಿದ್ದಾರೆ.
ಈ ವಂಚನೆಯನ್ನು ಮೇ 2022 ರಿಂದ ಆಗಸ್ಟ್ 2024 ರ ನಡುವೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಲಿಯಾ ಭಟ್ ಅವರ ತಾಯಿ, ನಟಿ-ನಿರ್ದೇಶಕಿ ಸೋನಿ ರಜ್ದಾನ್ ಜನವರಿ 23 ರಂದು ಜುಹು ಪೊಲೀಸರಿಗೆ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿತು. ನಂತರ, ಕ್ರಿಮಿನಲ್ ನಂಬಿಕೆ ದ್ರೋಹ ಮತ್ತು ವಂಚನೆಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು ಮತ್ತು ಪೊಲೀಸರು ವೇದಿಕಾ ಶೆಟ್ಟಿಯನ್ನು ಹುಡುಕಲು ಪ್ರಾರಂಭಿಸಿದ್ದರು.
ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್ ಅನ್ನು ಆಲಿಯಾ 2021 ರಲ್ಲಿ ಸ್ಥಾಪಿಸಿದರು. ಕಂಪನಿಯ ಮೊದಲ ಚಿತ್ರ ಡಾರ್ಲಿಂಗ್ಸ್, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ವೇದಿಕಾ ಶೆಟ್ಟಿ 2021 ರಿಂದ 2024 ರವರೆಗೆ ಆಲಿಯಾ ಭಟ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡಿದರು. ಈ ಸಮಯದಲ್ಲಿ, ಅವರು ನಟಿಯ ಹಣಕಾಸಿನ ದಾಖಲೆಗಳು ಮತ್ತು ಪಾವತಿಗಳನ್ನು ನಿರ್ವಹಿಸಿದರು ಮತ್ತು ಅವರ ವೇಳಾಪಟ್ಟಿಯನ್ನು ಯೋಜಿಸಿದರು.
ತನಿಖೆಯ ವೇಳೆ ವೇದಿಕಾ ಶೆಟ್ಟಿ ನಕಲಿ ಬಿಲ್‌ಗಳನ್ನು ತಯಾರಿಸಿ, ಭಟ್ ಅವರಿಂದ ಸಹಿ ಮಾಡಿಸಿಕೊಂಡು ಹಣವನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತನ್ನ ಪ್ರಯಾಣ, ಸಭೆಗಳು ಮತ್ತು ಇತರ ಸಂಬಂಧಿತ ವ್ಯವಸ್ಥೆಗಳಿಗೆ ಖರ್ಚು ಮಾಡಲಾಗಿದೆ ಎಂದು ಅವರು ನಟಿಗೆ ತಿಳಿಸಿದ್ದರು ಎನ್ನಲಾಗಿದೆ.
ಈ ನಕಲಿ ಬಿಲ್‌ಗಳನ್ನು ನೈಜವೆಂದು ತೋರಿಸಲು ವೇದಿಕಾ ಶೆಟ್ಟಿ ವೃತ್ತಿಪರ ಟೂಲ್‌ಗಳನ್ನು ಬಳಸಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆಲಿಯಾ ಭಟ್ ಸಹಿ ಮಾಡಿದ ನಂತರ, ಮೊತ್ತವನ್ನು ಅವರ ಸ್ನೇಹಿತನ ಖಾತೆಗೆ ವರ್ಗಾಯಿಸಲಾಯಿತು, ನಂತರ ಅವರು ಹಣವನ್ನು ವೇದಿಕಾ ಶೆಟ್ಟಿಗೆ ಹಿಂತಿರುಗಿಸುತ್ತಿದ್ದರು.