ನಟಿ ಉಮಾಶ್ರೀ ಇವರಿಗೆ ಸುರಭಿ ಬಿಂದುಶ್ರೀ ಪ್ರಶಸ್ತಿ ಪ್ರಧಾನ

0
11

ಬೈಂದೂರು: ಸುರಭಿ ಬೈಂದೂರು ಸಾಂಸ್ಕೃತಿಕ, ಸಾಹಿತ್ಯ, ಸೇವಾ ಪ್ರತಿಷ್ಠಾನ ವತಿಯಿಂದ ಫೆ. 19ರಿಂದ 22ರವರೆಗೆ ‘ಸುರಭಿ ಜೈಸಿರಿ 2026’ ಕಾರ್ಯಕ್ರಮ ನಡೆಯಲಿದ್ದು, ಈ ಬಾರಿಯ ಸುರಭಿ ಬಿಂದುಶ್ರೀ ಪ್ರಶಸ್ತಿಗೆ ರಂಗಭೂಮಿ, ಚಲನಚಿತ್ರ ನಟಿ ಉಮಾಶ್ರೀ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಆನಂದ ಮದ್ದೋಡಿ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯು ₹25 ಸಾವಿರ ನಗದು, ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ದಿ.ಹೊಸಾಡು ಸುಬ್ರಾಯ ಶೇರುಗಾರ್ ಸಂಸ್ಮರಣೀಯ ಸಾಂಸ್ಕೃತಿಕೋತ್ಸವ ಪ್ರತಿದಿನ ಸಂಜೆ 6ಕ್ಕೆ ಇಲ್ಲಿನ ಶಾರದಾ ವೇದಿಕೆಯಲ್ಲಿ ನಡೆಯಲಿದೆ. 19ರಂದು ಮುಖಂಡ ಪ್ರಮೋದ್‌ ಮಧ್ವರಾಜ್‌ ಚಾಲನೆ ನೀಡುವರು. ವರಲಕ್ಷ್ಮೀ ಚಾರಿಟಬಲ್‌ ಟ್ರಸ್ಟ್‌ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸುವರು. ಸಂಜೆ ಸುರಭಿ ಯಕ್ಷ ಕಲಾವಿದರಿಂದ ಯಕ್ಷ ಸಂಭ್ರಮ ನಡೆಯಲಿದೆ ಎಂದರು.

20ರಂದು ಸುರಭಿ ಬಿಂದುಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಅವರು ಉಮಾಶ್ರೀ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸುವರು. ಸುರಭಿ ಭರತನಾಟ್ಯ ವಿದ್ಯಾರ್ಥಿಗಳಿಂದ ನಾಟ್ಯೋತ್ಸವ ನಡೆಯಲಿದೆ ಎಂದು ತಿಳಿಸಿದರು.

21ರಂದು ಮಂಗಳೂರು ಫಾದರ್‌ ಮುಲ್ಲರ್‌ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಪ್ರಭಾಕರ ಎಚ್.‌ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಸಂಸ್ಮರಣಾ ನುಡಿಗಳನ್ನಾಡುವರು. ಸುರಭಿಯ ನೃತ್ಯ ಕಲಾವಿದರಿಂದ ಜಾನಪದ, ನಾಟ್ಯ ವೈಭವ, ಹಾಸ್ಯ ಕಲಾವಿದ ಪ್ರೊ.ಕೃಷ್ಣ ಗೌಡ ಮತ್ತು ತಂಡದವರಿಂದ ಹಾಸ್ಯೋತ್ಸವ ನಡೆಯಲಿದೆ.

22ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಭಾಗವಹಿಸಲಿದ್ದು, ಮುಖಂಡ ರಮಾನಾಥ ರೈ ಸಮಾರೋಪ ನುಡಿಗಳನ್ನಾಡುವರು. ಸುರಭಿ ವಿದ್ಯಾರ್ಥಿಗಳಿಂದ ನಾದ ಗಾನಾಮೃತ, ಕುಂಚ ಸಂಭ್ರಮ, ಮಂಗಳೂರು ಸನಾತನ ತಂಡದಿಂದ ಸನಾತನ ರಾಷ್ಟ್ರಾಂಜಲಿ ನಾಟ್ಯವೈವಿಧ್ಯ ನಡೆಯಲಿದೆ ಎಂದು ವಿವರಿಸಿದರು.

ವಿದ್ವಾನ್ ಚಂದ್ರಶೇಖರ ನಾವಡ ಸುರತ್ಕಲ್ ಅವರಿಗೆ ಗುರುವಂದನೆ, ಬಾಲಪ್ರತಿಭೆಗಳಾದ ಕೃತಿಕಾ ಕೃಷ್ಣ ಗಾಣಿಗ, ತ್ರಿಷಾ, ದೀಪ್ತಾ ಡಿ. ಕುಂದರ್ ಅವರಿಗೆ ಗೌರವಾರ್ಪಣೆ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ರಾಮಕೃಷ್ಣ ದೇವಾಡಿಗ ಉಪ್ಪುಂದ, ಉಪಾಧ್ಯಕ್ಷ ಭಾಸ್ಕರ ಬಾಡ, ಸಂಘಟನಾ ಕಾರ್ಯದರ್ಶಿ ವೆಂಕಟರಮಣ ಜಿ. ಮಯ್ಯಾಡಿ, ಸುರಭಿ ನಿರ್ದೇಶಕ ಸುಧಾಕರ ಪಿ. ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here