ಉಡುಪಿ: ಕೃಷಿಕರ ಬದುಕನ್ನು ಹಸನಾಗಿಸುವ ಕೃಷಿ ಮೇಳಗಳು ಬಹಳ ಅರ್ಥಪೂರ್ಣವಾಗಿರುತ್ತವೆ. ರಾಜ್ಯದ ಬೇರೆ ಬೇರೆ ಊರುಗಳಿಂದ ಜಿಲ್ಲೆಯ ಕೃಷಿ ಮೇಳಗಳಿಗೆ ಬರುವ ಕೃಷಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ಬೆಳವಣಿಗೆ ಸಂತೋಷದಾಯಕವಾಗಿದೆ. ದೇಶದ ಬೆನ್ನೆಲುಬಾದ ರೈತ ಜನರಿಗೆಂದೇ ಆಯೋಜಿಸಲಾಗುವ ಇಂತಹ ಕೃಷಿಮೇಳಗಳು ಆರ್ಥಿಕತೆಗೆ ಚೈತನ್ಯ ತುಂಬುತ್ತವೆ. ಈ ಕೃಷಿ ಮೇಳವು ಭವಿಷ್ಯದ ಮಾರ್ಗಸೂಚಿಯಾಗಿ ಹೊರಹೊಮ್ಮಲಿ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ, ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಮತ್ತು ಡಿಪ್ಲೊಮಾ ಕೃಷಿ ಮಹಾವಿದ್ಯಾಲಯ ಬ್ರಹ್ಮಾವರ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ, ಕೃಷಿ, ತೋಟಗಾರಿಕೆ ಪಶು ಸಂಗೋಪನೆ, ಮೀನುಗಾರಿಕೆ ಅರಣ್ಯ ಇಲಾಖೆ ಉಡುಪಿ ಮತ್ತು ದ.ಕ ಜಿಲ್ಲೆ, ಜಿಲ್ಲಾ ಕೃಷಿಕ ಸಮಾಜ, ಉಡುಪಿ ಮತ್ತು ದ.ಕ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ-ಸಂಜೀವಿನಿ, ಜಿಲ್ಲಾ ಪಂಚಾಯತ್, ಗೇರು ಮತ್ತು ಕೋಕೋ ಅಭಿವೃದ್ದಿ ನಿರ್ದೇಶನಾಲಯ ಕೊಚ್ಚಿ, ಬ್ಯಾಂಕ್ ಆಫ್ ಬರೋಡಾ(ವಿಜಯ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನ) ಉಡುಪಿ, ಕೆನರಾ ಬ್ಯಾಂಕ್, ವಾರಂಬಳ್ಳಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ(ರಿ) ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಾವರದ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ಎರಡು ದಿನಗಳ ಕೃಷಿ ಮೇಳವನ್ನುದ್ಘಾಟಿಸಿ ಅವರು ಮಾತನಾಡಿದರು.
ಕೃಷಿಮೇಳದಲ್ಲಿ ೨೦೦ ಕ್ಕೂ ಮಿಕ್ಕಿ ಸ್ಟಾಲ್ ಗಳು, ವೈವಿಧ್ಯಮಯ ಕೃಷಿ ಹಾಗೂ ಪರಿಕರಗಳು, ಹಣ್ಣು-ತರಕಾರಿಗಳ ವಿಧ ವಿಧ ಗಿಡಗಳಿದ್ದು ಹೊರಜಿಲ್ಲೆಗಳ ರೈತರನ್ನೂ ಆಕರ್ಷಿಸುತ್ತಿದೆ. ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2100 ಹೆಚ್ಚು ಯೋಜನೆಗಳನ್ನು ಜಾರಿ ಮಾಡಿದ್ದು, 42,000 ಕೋಟಿ ರೂ. ಗಳಷ್ಟು ಹಣವನ್ನು ಬಿಡುಗಡೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಿದಾಗ ಕೃಷಿ ಕ್ಷೇತ್ರವು ಬೆಳವಣಿಗೆಯನ್ನು ದಾಖಲಿಸುತ್ತದೆ. ಭತ್ತದ ಬೆಂಬಲ ಬೆಲೆ ಮತ್ತು ಕಾಳು ಮೆಣಸಿನ ಬೆಳೆಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಕಾರ್ಯಯೋಜನೆಯನ್ನು ರೂಪಿಸಿದಾಗ ರೈತರಿಗೆ ನೆರವಾಗುತ್ತದೆ. ಕೃಷಿ ವಲಯದ ಸಮಸ್ಯೆಗಳು, ರೈತರ ಸಂಘಟನಾತ್ಮಕ ನಿಲುವುಗಳು, ಕೃಷಿಕರ ಅಭಿವೃದ್ದಿ ಬಗ್ಗೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಚರ್ಚೆ ನಡೆದು ರೈತರಿಗೆ ಯೋಜನೆಗಳ ಪ್ರಯೋಜನ ದೊರೆಯಬೇಕು ಎಂದರು.
ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಬೇಕೆನ್ನುವುದು ಬಹುಕಾಲದ ಬೇಡಿಕೆಯಾಗಿದ್ದು, ಕಾಲೇಜು ಸ್ಥಾಪನೆಗೆ ಕೇಂದ್ರದಿಂದ ಬೇಕಾಗುವ ಎಲ್ಲ ರೀತಿಯ ನೆರವನ್ನು ನೀಡಲಾಗುವುದು. ಕಾಲೇಜು ಸ್ಥಾಪನೆ ರಾಜ್ಯಕ್ಕೆ ಸಂಬಂಧಪಟ್ಟ ವಿಚಾರವಾಗಿದ್ದಲ್ಲಿ ರಾಜ್ಯ ಸರ್ಕಾರ ಮತ್ತು ಕೃಷಿ ಸಚಿವರು ಈ ಬಗ್ಗೆ ಗಮನ ಹರಿಸಿ ಕಾಲೇಜು ಸ್ಥಾಪನೆಯ ಬಗ್ಗೆ ತಕ್ಷಣ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದಲ್ಲಿ ಕೇಂದ್ರ ಕೃಷಿ ಸಚಿವರ ಗಮನಕ್ಕೆ ತಂದು ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸಬಹುದು ಎಂದ ಅವರು ಪ್ರತಿ ಮೂರು ಅಥವಾ ಆರು ತಿಂಗಳಿಗೊಮ್ಮೆ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ನೇತೃತ್ವದಲ್ಲಿ ರೈತರು ಮತ್ತು ರೈತ ಸಂಘಟನೆಗಳ ಜೊತೆ ಸಂವಾದಗಳನ್ನು ನಡೆಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ ಕೃಷಿಕರ ಬದುಕಿಗೆ ಶಕ್ತಿ ನೀಡಬೇಕು ಎಂದು ಅವರು ಹೇಳಿದರು.
ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಉಡುಪಿಯು ಬಹಳ ವೈಶಿಷ್ಟ್ಯಪೂರ್ಣ ಜಿಲ್ಲೆಯಾಗಿದ್ದು 12 ತಿಂಗಳು 12 ವಿಧದ ಬೆಳೆಗಳನ್ನು ಬೆಳೆಯುವಂತಹ ಹವಾಗುಣವನ್ನು ಹೊಂದಿದೆ. ಜಿಲ್ಲೆಯಲ್ಲಿ ಕೃಷಿಗೆ ವಿಪುಲ ಅವಕಾಶಗಳಿವೆ. ಬ್ರಹ್ಮಾವರದಲ್ಲಿ 345 ಎಕರೆ ಮತ್ತು ಬೈಕಾಡಿಯಲ್ಲಿ 110 ಎಕರೆ ಕೃಷಿ ಭೂಮಿ ಮೀಸಲಿದ್ದು, ಕೃಷಿ ಚಟುವಟಿಕೆಗಳಿಗೆ ಈ ಭೂಮಿಯನ್ನು ಬಳಸಿಕೊಂಡಾಗ ಜಿಲ್ಲೆಯ ಅಭಿವೃದ್ದಿ ಸಾಧ್ಯವಾಗುತ್ತದೆ. ಬ್ರಹ್ಮಾವರ ಪ್ರದೇಶದಲ್ಲಿ ಅತಿ ಅಗತ್ಯವಿರುವ ಕೃಷಿ ಕಾಲೇಜಿಗೆ ರೂಪ ದೊರೆತಾಗ ಸ್ಥಳೀಯ ಯುವಕರು ಕೃಷಿ ಸಂಶೋಧನಾ ಕಾರ್ಯಗಳಲ್ಲಿ ನಿರತರಾಗಿ ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಇಲ್ಲಿನ ಸಕ್ಕರೆ ಕಾರ್ಖಾನೆಗೂ ಹೊಸ ರೂಪ ನೀಡುವ ಪ್ರಯತ್ನದಲ್ಲಿದ್ದೇವೆ, ಇದರಿಂದ ಸ್ಥಳೀಯರಿಗೆ ಉದ್ಯೋಗಾವಕಾಶ ದೊರೆಯುವುದು. ಕೃಷಿಯ ಜೊತೆ ಮೀನುಗಾರಿಕೆಯೂ ಕರಾವಳಿಯ ಶಕ್ತಿಯಾಗಿದ್ದು, ಕೃಷಿ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ದೊರೆತಾಗ ಕೃಷಿಕರಿಗೆ ಸಹಾಯವಾಗುವುದು. ಕೃಷಿಕರ ಕಲ್ಯಾಣಕ್ಕಾಗಿ ಒಂದು ಜಿಲ್ಲೆ ಒಂದು ಉತ್ಪನ್ನ, ಕಿಸಾನ್ ಸಮ್ಮಾನ್, ಫಸಲ್ ಬೀಮಾ, ಪಿಎಂ ಧನ ಧಾನ್ಯ ಯೋಜನೆಗಳನ್ನು ತರಲಾಗಿದ್ದು ಇವುಗಳು ಸಮರ್ಪಕವಾಗಿ ಜಾರಿಯಾದಾಗ ಕೃಷಿಕರಿಗೆ ಸಹಾಯವಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಕುಲಪತಿ ಆರ್. ಸಿ ಜಗದೀಶ್, ಜಿಲ್ಲಾಧಿಕಾರಿ ಸ್ವರೂಪ್ ಟಿ.ಕೆ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರುಗಳಾದ ಅಶೋಕ್ ಕುಮಾರ್ ಕೊಡ್ಗಿ, ವಿಜಯ ಕುಮಾರ್ ರೈ, ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಜೆ.ಸಿ., ಮೀನುಗಾರಿಕಾ ಇಲಾಖೆ ಜಂಟಿ ನಿರ್ದೇಶಕ ವಿವೇಕ್ ಆರ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ, ರಾಜು ಎಂ.ಎಸ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಎಂ.ಸಿ.ರೆಡ್ಡಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್ ಡಿ.ಎನ್, ಕೃಷಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್ ನಾಯ್ಕ್, ಕೆಳದಿ ವಿ.ವಿ. ಯ ಡಾ. ಬಿ.ಎಂ. ದುಷ್ಯಂತ್ ಕುಮಾರ್, ಡಾ.ಜಿ.ಕೆ ಗಿರಿಜೇಶ್, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ಅಮಿತಾಭ್ ಶಂಕರ್, ಬ್ರಹ್ಮಾವರ ಕೃಷಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.