ಬೆಂಗಳೂರು: ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬ ಅಭಿಪ್ರಾಯಗಳು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಮೂಲದ ಟೇಕ್ ಯು ಫಾರ್ವರ್ಡ್ ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಯೂಸರ್ ಎಕ್ಸ್ಪೀರಿಯನ್ಸ್ (UX) ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಉದಾಹರಿಸಿ ಮಾತನಾಡಿದ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲಾಗಿವೆ. ಅಲ್ಲದೆ ಅವುಗಳು ಕೇವಲ ತಾಂತ್ರಿಕತೆಯನ್ನು ಹೊಂದಿದ್ದು, ಅರ್ಜಿಯನ್ನು ಉತ್ತಮಗೊಳಿಸುವ ಕನಿಷ್ಠ ಪ್ರಯತ್ನವೂ ಕಂಡುಬಂದಿಲ್ಲವೆಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
35 ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು ಕಾಪಿ-ಪೇಸ್ಟ್ ಅಥವಾ AI ಆಧಾರಿತ ಉತ್ತರಗಳನ್ನು ಸಲ್ಲಿಸಿದ್ದರೆಂದು ಅವರು ಹೇಳಿದ್ದಾರೆ. ಸಂಶೋಧನೆ, ವೈಯಕ್ತಿಕ ಅಭಿಪ್ರಾಯ ಅಥವಾ ಕೆಲಸದ ಮೇಲೆ ಆಸಕ್ತಿ ತೋರಿದವರ ಸಂಖ್ಯೆ ಕಡಿಮೆ ಇರುವುದು ಸ್ಪಷ್ಟವಾಗಿ ಗೋಚರಿಸಿತು ಎಂದು ತಿಳಿಸಿದ್ದಾರೆ. ಈ 35 ಮಂದಿಯಲ್ಲಿ ಕೇವಲ ಒಬ್ಬ ಅಭ್ಯರ್ಥಿ ಮಾತ್ರ ಪ್ರಾಮಾಣಿಕ ಪ್ರಯತ್ನ ತೋರಿದ್ದು, ಆತನನ್ನು ನೇಮಕ ಮಾಡಲಾಗಿದೆ. ಉಳಿದವರು ಮೂಲಭೂತ ಸಿದ್ಧತೆಯನ್ನೂ ತೋರಲಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, AI ಉಪಕರಣಗಳಿಂದ ಸಾಮಾನ್ಯ, ಒಂದೇ ಮಾದರಿಯ ಅರ್ಜಿಗಳು ಹೆಚ್ಚಾಗಿವೆ ಎಂದು ಹಲವರು ಒಪ್ಪಿಕೊಂಡಿದ್ದಾರೆ. ನಿಜವಾದ ಸಾಮರ್ಥ್ಯ ತೋರಿಸಲು ಇಂದಿನ ದಿನಗಳಲ್ಲಿ ಆಳವಾದ ಪರಿಶ್ರಮ ಮತ್ತು ವೈಯಕ್ತಿಕತೆ ಮುಖ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

