ನ. 2 ರಂದು ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ದ್ವಯ ಭಾಗವತರ ಪುಣ್ಯಸ್ಮರಣೆ; ಹಿರಿಯ ಕಲಾವಿದ ಪೆರುವಾಯಿ ನಾರಾಯಣ ಭಟ್ಟರಿಗೆ ‘ಬಲಿಪ ಪ್ರಶಸ್ತಿ ಪ್ರಧಾನ- 2025’
ವರದಿ ÷ಮಂದಾರ ರಾಜೇಶ್ ಭಟ್, ತುಳುನಾಡು ವಾರ್ತೆ

 ತುಳುನಾಡು: ಬೆಳಕು ಚೆಲ್ಲುವವರು ಮಾತ್ರ ಪ್ರಜ್ವಲಿಸಲು ಸಾಧ್ಯ ಎಂಬ ನುಡಿಗೆ ಪೂರಕವೆಂಬಂತೆ, ಸಾಂಸ್ಕೃತಿಕ ಲೋಕದಲ್ಲಿ ಕೆಲವು ವ್ಯಕ್ತಿತ್ವಗಳು ಒಂದು ಯುಗಕ್ಕೆ ಭಾಷ್ಯ ಬರೆಯಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಬಲಿಪ ಪರಂಪರೆ.
ಯಕ್ಷಗಾನದ ತೆಂಕುತಿಟ್ಟು ಶೈಲಿಯಲ್ಲಿ, ತಮ್ಮ ಕಂಚಿನ ಕಂಠ ಮತ್ತು ಅನನ್ಯ ಶೈಲಿಯಿಂದ ಆರು ದಶಕಗಳ ಕಾಲ ಕಲಾರಸಿಕರ ಹೃದಯದಲ್ಲಿ ಅಜರಾಮರರಾದವರು ದಿ. ಬಲಿಪ ನಾರಾಯಣ ಭಾಗವತರು. ಅವರ ಜೀವನ, ಕೇವಲ ಒಂದು ತಿರುಗಾಟವಾಗಿರದೆ, ಯಕ್ಷಗಾನದ ಶಬ್ದ, ಛಂದಸ್ಸು ಮತ್ತು ಗಾನ ಶೈಲಿಗೆ ‘ಬಲಿಪ ಶೈಲಿ’ ಎಂಬ ಹೊಸ ಆಯಾಮ ನೀಡಿದ ಮಹಾನ್ ಪಯಣ. ಯಕ್ಷಗಾನದ ಕಲಾ ಸೇವೆ ಜೊತೆ ಜೊತೆಗೆ ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಮೇಳದಲ್ಲಿ 4 ದಶಕಗಳಿಗೂ ಹೆಚ್ಚು ಕಾಲ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಬಲಿಪ ಪ್ರಸಾದ ಭಾಗವತರು ಕೂಡ ಯಕ್ಷಗಾನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರು. ಕಟೀಲು ಮೇಳದಲ್ಲಿ ಮುಖ್ಯ ಭಾಗವತರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬಲಿಪ ಕುಟುಂಬದ ಬಲಿಪ ಶಿವಶಂಕರ ಭಟ್ ಮತ್ತಿತರರು ಬಲಿಪ ಶೈಲಿಯನ್ನು ಮುಂದುವರಿಸುತ್ತಿದ್ದಾರೆ
2025ರ ನವೆಂಬರ್ 2 ರಂದು ಮೂಡುಬಿದಿರೆಯ ಏಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ “ಬಲಿಪ ಭಾಗವತ ದ್ವಯರ ಪುಣ್ಯಸ್ಮರಣೆ ಮತ್ತು ಪ್ರಶಸ್ತಿ ಪ್ರದಾನ” ಕಾರ್ಯಕ್ರಮವಿದ್ದು, ಸಮಾರಂಭವು ಕೇವಲ ಒಂದು ಕಾರ್ಯಕ್ರಮವಲ್ಲ; ಅದೊಂದು ಪರಂಪರೆಯನ್ನು ಸ್ಮರಿಸುವ ಪವಿತ್ರ ನಮನವಾಗಿದೆ.
ಅಂದಿನ ಸಭಾ ಕಾರ್ಯಕ್ರಮದ ಅಧ್ಯಕ್ಷರಾಗಿ ಯುವರಾಜ ಜೈನ್, ಮುಖ್ಯ ಅತಿಥಿಗಳಾಗಿ ಅಭಯಚಂದ್ರ ಜೈನ್, ರಶ್ಮಿತಾ ಜೈನ್, ಕೃಷ್ಣರಾಜ ಹೆಗ್ಡೆ, ಶ್ರೀಪತಿ ಭಟ್ ಭಾಗವಹಿಸಲಿದ್ದಾರೆ.

ಈ ಸಮಾರಂಭದ ಮೂಲಕ ಭಾಗವತರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ, ತಮ್ಮ ಅಪೂರ್ವ ಕಲಾಸೇವೆಯಿಂದ ಯಕ್ಷಗಾನವನ್ನು ಶ್ರೀಮಂತಗೊಳಿಸಿದ ಮತ್ತೊಬ್ಬ ಹಿರಿಯ ಕಲಾವಿದರಾದ ಪೆರುವಾಯಿ ನಾರಾಯಣ ಭಟ್ ಅವರಿಗೆ “ಬಲಿಪ ಭಾಗವತ ಪ್ರಶಸ್ತಿ-2025” ನೀಡಿ ಗೌರವಿಸಲಾಗುತ್ತಿದೆ. ಇದು ಹಿಮ್ಮೇಳಕ್ಕೆ ಸಲ್ಲುವ ಗೌರವ, ಯಕ್ಷಗಾನದ ಯಶಸ್ಸಿನಲ್ಲಿ ತೆರೆಮರೆಯಲ್ಲಿ ಶ್ರಮಿಸುವ ಕಲಾವಿದರಿಗೆ ಸಂದ ದೊಡ್ಡ ಮಾನ್ಯತೆ ಎಂದು ವಿಶ್ಲೇಷಿಸಬಹುದಾಗಿದೆ.
 ಪ್ರಶಸ್ತಿ ಪ್ರದಾನದ ಬಳಿಕ ನಡೆಯಲಿರುವ ‘ಗುರುದಕ್ಷಿಣೆ’ ತಾಳಮದ್ದಳೆಯು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ. ‘ಬಲಿಪ’ ಶೈಲಿಯ ಸಮರ್ಥ ಕೊಂಡಿಯಾಗಿರುವ ಶ್ರೀ ಬಲಿಪ ಶಿವಶಂಕರ ಭಟ್ ಅವರ ಭಾಗವತಿಕೆಯಲ್ಲಿ, ದಿಗ್ಗಜ ಕಲಾವಿದರ ಅರ್ಥಗಾರಿಕೆ ಮತ್ತು ಹಿಮ್ಮೇಳದ ಸಮನ್ವಯದಲ್ಲಿ ಈ ತಾಳಮದ್ದಳೆಯು ಜ್ಞಾನ ಮತ್ತು ಕಲೆಯ ಸಂಗಮವಾಗಿ ಪ್ರೇಕ್ಷಕರನ್ನು ರಂಜಿಸಲಿದೆ.ಯಕ್ಷಗಾನದ ಮೇರು ಭಾಗವತರ ಆಶಯದಂತೆ, ಅವರ ಕುಟುಂಬದವರು ಮತ್ತು ಕುಟುಂಬದ ಆತ್ಮೀಯರು ಮತ್ತು ಬಲಿಪ ಶೈಲಿಯ ಪ್ರೋತ್ಸಾಹಕರಾದ ಏಕ್ಸಲೆಂಟ್ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿರುವ ಈ ಕಾರ್ಯಕ್ರಮವು – ಕಲೆಗೆ ಬದುಕು ಮುಡಿಪಾಗಿಟ್ಟವರನ್ನು ಸದಾ ಗೌರವಿಸಬೇಕು ಎಂಬ ಸಂದೇಶವನ್ನು ಸಾರುತ್ತದೆ. ಈ ಸಾಂಸ್ಕೃತಿಕ ಮಹಾಕೂಟಕ್ಕೆ ಸಮಸ್ತ ಕಲಾಭಿಮಾನಿಗಳು ಆಗಮಿಸಿ, ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಬೇಕಾಗಿ ಆಯೋಜಕರು ವಿನಂತಿಸಿದ್ದಾರೆ.

