ಮೂಡುಬಿದಿರೆ : ಮೂಡುಬಿದ್ರೆಯ ಕಡಲ ಕೆರೆ, ವೀರರಾಣಿ ಅಬ್ಬಕ್ಕ ಸಂಸ್ಕೃತಿಕ ಗ್ರಾಮದಲ್ಲಿ ನಡೆಯುವ ಪ್ರತಿಷ್ಠಿತ ಕೋಟಿ–ಚೆನ್ನಯ್ಯ ಜೋಡುಕೆರೆ ಕಂಬಳೋತ್ಸವದಲ್ಲಿ ಜವನೆರ್ ಬೆದ್ರ ಫೌಂಡೇಶನ್ (ರಿ) ಸಂಸ್ಥಾಪಕರಾದ ಅಮರ್ ಕೋಟೆ ಅವರಿಗೆ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ವರ್ಷದ ಕಂಬಳೋತ್ಸವವು ಚೌಟ ವಂಶದ ವೀರರಾಣಿ ಅಬ್ಬಕ್ಕ ದೇವಿಯ 500ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ವಿಶೇಷ ಮಹತ್ವ ಪಡೆದಿದೆ. ಈ ಐತಿಹಾಸಿಕ ಸಂದರ್ಭವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ, ಜವನೆರ್ ಬೆದ್ರ ಫೌಂಡೇಶನ್ ಮೂಲಕ ವೀರರಾಣಿ ಅಬ್ಬಕ್ಕ ದೇವಿಯ ಕುರಿತು ಅನೇಕ ಜಾಗೃತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅಮರ್ ಕೋಟೆ ಅವರು ಆಯೋಜಿಸಿದ್ದಾರೆ.
‘ಮೂಡುಬಿದ್ರೆಯ ಮಣ್ಣಿನ ಮಗಳು ಅಬ್ಬಕ್ಕ’ ಎಂಬ ಅಭಿಯಾನದ ಮೂಲಕ ಇತಿಹಾಸದಲ್ಲಿ ಗೌನವಾಗಿದ್ದ ವೀರರಾಣಿ ಅಬ್ಬಕ್ಕ ದೇವಿಯ ಶೌರ್ಯ, ತ್ಯಾಗ ಮತ್ತು ಮಹಿಳಾ ಶಕ್ತಿಯ ಸಂದೇಶವನ್ನು ಜನಸಾಮಾನ್ಯರ ಮಧ್ಯೆ ಪ್ರಚಲಿತಕ್ಕೆ ತರಲು ಅವರು ನಿರಂತರ ಪ್ರಯತ್ನ ನಡೆಸಿದ್ದಾರೆ. ಈ ಅಭಿಯಾನದ ಫಲವಾಗಿ ವೀರರಾಣಿ ಅಬ್ಬಕ್ಕ ದೇವಿಯ ವಿಗ್ರಹಗಳನ್ನು ವಿವಿಧ ಸ್ಥಳಗಳಲ್ಲಿ ಸ್ಥಾಪಿಸುವಲ್ಲಿ ಯಶಸ್ಸು ಕಂಡಿದ್ದಾರೆ.
ಅಲ್ಲದೆ, ಮಹಿಳೆಯರಿಗಾಗಿ ವೀರರಾಣಿ ಅಬ್ಬಕ್ಕನ ಕುರಿತು ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿ, ಮಹಿಳಾ ಸಬಲೀಕರಣ, ಅಬ್ಬಕ್ಕನ ಹೆಸರಿನಲ್ಲಿ ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವುದು ವಿಶೇಷವಾಗಿದೆ.
ಉಮನಾಥ್ ಕೋಟ್ಯಾನ್ ಅವರು ಶಾಸಕರಾಗಿ ಆಯ್ಕೆಯಾದ ನಂತರ ಆಯೋಜಿಸಲಾದ ಪ್ರಥಮ ಕಂಬಳೋತ್ಸವದಲ್ಲಿ ವೀರರಾಣಿ ಅಬ್ಬಕ್ಕ ದೇವಿಯ ಚಿತ್ರಪಟವನ್ನು ಪ್ರತಿಷ್ಠಾಪಿಸಿ, ಮುಂದಿನ ದಿನಗಳಲ್ಲಿ ಅದೇ ಸ್ಥಳದಲ್ಲಿ ಅಬ್ಬಕ್ಕ ದೇವಿಯ ಮೂರ್ತಿ ಸ್ಥಾಪನೆಗೆ ಮನವಿ ಸಲ್ಲಿಸಿದವರೂ ಅಮರ್ ಕೋಟೆ ಅವರೇ ಆಗಿದ್ದಾರೆ.
108 ವಾರದ ನಿರಂತರ ಸ್ವಚ್ಛ ಮೂಡುಬಿದರೆ ಅಭಿಯಾನ, ತುರ್ತು ಪರಿಸ್ಥಿತಿಗೆ ರಕ್ತ ನಿಧಿ, ಕೃಷ್ಣೋತ್ಸವ, ಕದಂಬವನ ಅಭಿಯಾನ, ವಿವಿಧ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ನಡೆಸಿ ನಿರಂತರ ಸೇವೆಯನ್ನು ಸಮಾಜಕ್ಕೆ ಸಲ್ಲಿಸಿಕೊಂಡು ಬಂದಿರುತ್ತಾರೆ.
ವೀರರಾಣಿ ಅಬ್ಬಕ್ಕ ದೇವಿಯ ಇತಿಹಾಸವನ್ನು ಜನಮಾನಸದಲ್ಲಿ ಜೀವಂತವಾಗಿಡುವಲ್ಲಿ ಮತ್ತು ಮಹಿಳಾ ಶಕ್ತಿಗೆ ಸ್ಫೂರ್ತಿಯ ಸಂಕೇತವಾಗಿ ಅಬ್ಬಕ್ಕನನ್ನು ಮುಂದಿಟ್ಟುಕೊಂಡು ಬಂದಿರುವ ಅಮರ್ ಕೋಟೆ ಅವರ ಸೇವೆಯನ್ನು ಗುರುತಿಸಿ, ಮೂಡುಬಿದಿರೆಯ ಪ್ರತಿಷ್ಠಿತ ಕಂಬಳೋತ್ಸವದಲ್ಲಿ ಈ ಗೌರವ ಸನ್ಮಾನ ನಡೆಯಲಿದೆ.

