ಅಮರಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ಪುರಸ್ಕೃತ ಶಿಲಾಶಿಲ್ಪಿ ಶ್ರೀಯುತ ಗಣಪತಿ ಆಚಾರ್ಯ ಅತ್ತೂರು ಉಡುಪಿ ತುಳುವ ಮಹಾಸಭಾದ ಭೇಟಿ

0
57

ಉಡುಪಿ: ತುಳುವಲ್ಡ್ ಫೌಂಡೇಶನ್ ಕಟೀಲ್ ನ ತುಳುವ ಮಹಾಸಭಾ ಮುಖೇನ ನಡೆಸಲ್ಪಡುತ್ತಿರುವ ಪುರಾತನ ದೇವಾಲಯ, ಪ್ರಸ್ತುತ ಅಜೀರ್ಣಾವಸ್ಥೆಯಲ್ಲಿರುವ ಬಸ್ರೂರುರಿನ ತುಳುವೇಶ್ವರ ದೇವಾಲಯದ ಪುನರುತ್ಥಾನದ ಕಾರ್ಯವನ್ನು ಬಹುವಾಗಿ ಶ್ಲಾಘಿಸಿ, ತುಳುನಾಡಿನ ಈ ಪುಣ್ಯಭೂಮಿಗೆ ಸದಾ ದೈವ-ದೇವರ ಆಶೀರ್ವಾದವಿದೆ. ಮುಂದಿನ ಪೀಳಿಗೆಗೆ ಹಿಂದಿನ ಆಚಾರ-ವಿಚಾರಗಳು, ತುಳುನಾಡಿನ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ತುಳುವ ಮಹಾಸಭಾದಲ್ಲಿ ನಡೆಯಲಿ ಎಂದು ಆಶಿಸಿ ಹಾರೈಸಿದರು.

ಅಮರಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಯುತ ಗಣಪತಿ ಆಚಾರ್ಯ ಅತ್ತೂರು ಕಾರ್ಕಳ ಇವರನ್ನು ದಿನಾಂಕ 28/9/2025‌ ರಂದು ಉಡುಪಿ ತುಳುವ ಮಹಾಸಭಾದ ಪ್ರಧಾನ ಸಂಚಾಲಕರು, ಪಾರಂಪರಿಕ ವೈದ್ಯರಾದ ವಿಶ್ವನಾಥ ಆಚಾರ್ಯ ಪೆರ್ಡೂರು, ಸಂಚಾಲಕರಾದ ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು, ಬಾಲಕೃಷ್ಣ ಕಾರ್ಕಳ, ರಂಜಿತ್ ಕಾರ್ಕಳರವರು ತುಳುವ ಮಹಾಸಭಾವನ್ನು ಬಲಪಡಿಸುವ ನಿಟ್ಟಿನಲ್ಲಿ ಭೇಟಿ ನೀಡಿದರು.

ಶ್ರೀಯುತ ಗಣಪತಿ ಆಚಾರ್ಯ ಅತ್ತೂರು ಶಿಲ್ಪಿಗಳ ಜೀವನ-ಜೀವಮಾನ ಸಾಧನೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ರೆಯ ಅಡ್ಯಾಲ್ ನ ಅಕ್ಕಣ್ಣಿ ಆಚಾರ್ಯ ಹಾಗೂ ಶ್ರೀ ಸಂಕ್ರಯ್ಯ ಆಚಾರ್ಯರ ತುಂಬು ಸಂಸಾರದಲ್ಲಿ 1-1-1955 ರಲ್ಲಿ ಜನಿಸಿ 4ನೇ ತರಗತಿಯವರೆಗೆ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರೈಸಿ, ಕುಟುಂಬದ ಬಡತನಕ್ಕೆ ಬೆಂಗಾವಲಾಗುವ ನಿಟ್ಟಿನಲ್ಲಿ 8 ವರ್ಷಗಳ ಕಾಲ ತಮ್ಮ ತಂದೆಯ ಜೊತೆ ಪಾರಂಪರಿಕ ಕುಲಕಸುಬಾದ ಕಾಷ್ಠ ಶಿಲ್ಪವನ್ನು ವೃತ್ತಿಯಾಗಿ ಸ್ವೀಕರಿಸಿ, ತಂದೆಯ ನಿಧನದ ನಂತರ ಶಿಲಾಶಿಲ್ಪ ಶಾಸ್ತ್ರದತ್ತ ಆಕರ್ಷಿತರಾದ ಇವರು ಹೆಸರಾಂತ ಶಿಲ್ಪಿ ಹಾಗೂ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪ್ರಥಮ ಅಧ್ಯಕ್ಷರಾಗಿದ್ದ‌ ಶಿಲ್ಪಿ ಶ್ರೀಯುತ ಶಾಮರಾಯ ಆಚಾರ್ಯರ ಶಿಷ್ಯರಾಗಿ 12 ವರ್ಷಗಳ ಕಾಲ ವ್ಯಕ್ತಿನಿಷ್ಠೆ, ಪರಿಶ್ರಮ, ಪ್ರಾಮಾಣಿಕತೆಯಿಂದ ಶಿಲ್ಪ ಶಾಸ್ತ್ರವನ್ನು ಅಭ್ಯಸಿಸಿ ನಂತರ ಸ್ವತಂತ್ರವಾಗಿ ಶಿಲ್ಪ ಕಲಾಕೃತಿಯನ್ನು ರಚಿಸುವ ಅನುಭವವನ್ನು ಪಡೆದ ಇವರು ಕಾರ್ಕಳದ ಅತ್ತೂರಿನಲ್ಲಿ ಸ್ವಂತ ಜಾಗವನ್ನು ಖರೀದಿಸಿ ಮನೆಯಲ್ಲಿ ಶಿಲ್ಪಶಾಲೆಯನ್ನಾಗಿಸಿ ಇತರ ಶಿಲ್ಪಿಗಳನ್ನು ಸೇರಿಸಿ ಸ್ವಂತ ನೆಲೆಯಲ್ಲಿ ಶಿಲ್ಪಿಯನ್ನು ನಡೆಸಿಕೊಂಡು ಬಂದಿರುತ್ತಾರೆ.

ಸುಮಾರು 45 ವರ್ಷಗಳಿಂದ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡ ಇವರು ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯಗಳಲ್ಲಿಯೂ ನೂರಾರು ದೇವರ ವಿಗ್ರಹ, ನಾಗ ವಿಗ್ರಹ, 25ಕ್ಕೂ ಹೆಚ್ಚಿನ ನಾಗರಕಟ್ಟೆಯ ಸೂಕ್ಷ್ಮ ಕೆತ್ತನೆಗಳು, ದೇವಾಲಯಗಳ ಹೆಬ್ಬಾಗಿಲಿನ ಶಿಲಾ ಶಿಲ್ಪ ಕುಸುರಿ, 13ಕ್ಕೂ ಅಧಿಕ ದೈವಾಲಯಗಳನ್ನು ಆಯಪ್ರಮಾಣದಲ್ಲಿ ನಿರ್ಮಿಸಿ ಆಸ್ತಿಕ ಬಂಧುಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದೇವಾಲಯಗಳ ಶಿಲ್ಪ ರಚನೆಯಲ್ಲಿಯೂ ಸಿದ್ಧಹಸ್ತರಾದ ಇವರು ತಮ್ಮ ಕೈಚಳಕದಿಂದ ಪ್ರಮುಖವಾಗಿ ನೆಕ್ಲಾಜೆ ಶ್ರೀ ಕಾಳಿಕಾಂಬ ದೇವಸ್ಥಾನ ಕಾರ್ಕಳ, ಶ್ರೀ ಕಾಳಿಕಾಂಬ ದೇವಸ್ಥಾನ ಮದೂರು, ಚಿತ್ತಾರಿ ಶ್ರೀ ಮಹಾಬಲೇಶ್ವರ ದೇವಸ್ಥಾನ ಉಪ್ಪೂರು, ವರ್ತೆ ಕಲ್ಕುಡ ತೂಕತ್ತೆರಿ ದೈವಸ್ಥಾನ ಕೈರು ಪೆರ್ಡೂರು, ಶ್ರೀ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನ ಪನ್ವೆಲ್ ಮುಂಬೈ ಹೀಗೆ ಮುಂತಾದ ಕಡೆ ಶಿಲಾ ಶಿಲ್ಪದ ಕೆಲಸವನ್ನು ನಿರ್ವಹಿಸಿರುತ್ತಾರೆ.

ಶಿಲಾಶಿಲ್ಪ ಶಾಸ್ತ್ರ, ನೈಪುಣ್ಯತೆಯ ಬಗ್ಗೆ ಅಗಾಧ ಜ್ಞಾನವನ್ನು, ಸಾಧನೆಯನ್ನು ಮನಗಂಡು ಪ್ರಮುಖವಾಗಿ ಎಸ್ ಕೆ ಜಿ ಐ-ಪಾಲ್ಕೆ ಪ್ರಶಸ್ತಿ, ಅಮರ ಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ, ತುಳುವ ಮಂದಾರ ಪ್ರಶಸ್ತಿ ಹಾಗೂ ಇನ್ನಿತರ ಸನ್ಮಾನ ಪಾರಿತೋಷಕಗಳಿಗಿ ಭಾಜನರಾಗಿದ್ದಾರೆ. ಧರ್ಮಪತ್ನಿ ಕಲಾವತಿ, ಮಕ್ಕಳು ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನೊಳಗೊಂಡ ತುಂಬು ಸಂಸಾರಾಗಿರುವ ಇವರು ಪುತ್ರ ಶ್ರೀಯುತ ಸಂದೀಪ್ ರವರಿಗೂ ಕೂಡಾ ಶಿಲಾಶಿಲ್ಪದ ನೈಪುಣ್ಯತೆ, ಶಿಲಾ ಕುಸುರಿಗಳ ಚಾಕಚಕ್ಯತೆಯನ್ನು ಧಾರೆಯೆರೆದು ಮುಂದಿನ ಪೀಳಿಗೆಗೆ ಶಿಲ್ಪವಿದ್ಯಾಶಾಸ್ತ್ರವನ್ನು ನಶಿಸದರಂತೆ ಉತ್ತುಂಗಕ್ಕೇರಿಸುವ ಕಾಯಕವನ್ನು ನಿರ್ವಹಿಸುತ್ತಿದ್ದಾರೆ. ಪ್ರಾಚೀನ ಕುಸುರಿ ಕೆತ್ತನೆಗಳು, ವಿದ್ಯೆಗಳು ಅವನತಿ ಹೊಂದದೆ ಪುನರುತ್ಥಾನವಾಗಲಿ ಎಂಬುದು ನಮ್ಮ ಆಶಯ.

ಬರಹ- ಸೌಮ್ಯರಾಣಿ ವಿಶ್ವನಾಥ್ ಪೆರ್ಡೂರು

LEAVE A REPLY

Please enter your comment!
Please enter your name here