ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರ ಕಾರ್ಲ ಕನ್ಸ್ಟ್ರಕ್ಷನ್ ಕಂಟ್ರಾಕ್ಟರ್ ಹಾಗೂ ಟ್ರಕ್ ಚಾಲಕನ ವಿರುದ್ದ ಪ್ರಕರಣ ದಾಖಲು
ಉಡುಪಿ: ಟ್ರಕ್ ಚಕ್ರದಡಿಗೆ ಸಿಲುಕಿ ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಅಂಬಲಪಾಡಿ ರಾಷ್ಟ್ರೀಯ ಹೆದ್ದಾರಿ ಬೈಪಾಸ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಮೃತನನ್ನು ದೆಂದೂರುಕಟ್ಟೆಯ ಪ್ರದೀಪ (38) ಎಂದು ಗುರುತಿಸಲಾಗಿದೆ. ಇವರು ಅಂಬಲಪಾಡಿ ಸುರಭಿ ಅಟೋಮೊಬೈಲಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ರಸ್ತೆಯ ಗುಂಡಿಗೆ ಬಿದ್ದ ಸವಾರ ನಿಯಂತ್ರಣ ಕಳೆದುಕೊಂಡು ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಭಾರೀ ಗಾತ್ರದ ಟ್ರಕ್ ನಡಿಗೆ ಬಿದ್ದಿದ್ದಾರೆ. ಅಪಘಾತ ಸ್ಥಳದಿಂದ ಸುಮಾರು ೫೦ ಮೀಟರ್ ದೂರ ಸಾವರನನ್ನು ಟ್ರಕ್ ಎಳೆದುಕೊಂಡು ಹೋಗಿದೆ. ಪರಿಣಾಮ ತಲೆ ಭಾಗವು ಛಿದ್ರಗೊಂಡಿದೆ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಪಘಾತದ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರ್ಲ ಕನ್ಸ್ಟ್ರಕ್ಷನ್ ಗುತ್ತಿಗೆದಾರರ ನಿರ್ಲಕ್ಷ್ಯ
ಪ್ರಕರಣ ಸಂಬಂಧ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಕಾಮಗಾರಿ ಗುತ್ತಿಗೆದಾರರಾದ ಕಾರ್ಲ ಕನ್ಸ್ಟ್ರಕ್ಷನ್ ಕಂಟ್ರಾಕ್ಟರ್ ಹಾಗೂ ಟ್ರಕ್ ಚಾಲಕನ ವಿರುದ್ದ ಪ್ರಕರಣ ದಾಖಲಾಗಿದೆ. ಮಳೆಗೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬೃಹದಾಕಾರದ ಗುಂಡಿಗಳು ನಿರ್ಮಾಣ ಆಗಿದ್ದು, ಇದು ಸವಾರರ ಪ್ರಾಣಕ್ಕೆ ಕಂಟಕವಾಗುತ್ತಿದೆ. ತಾತ್ಕಾಲಿಕ ತುರ್ತು ದುರಸ್ತಿ ಕಾರ್ಯ ನಡೆಸಬೇಕಾದ ಅಧಿಕಾರಿಗಳು ಕುರುಡುತನ ಮೆರೆಯುತ್ತಿದ್ದು, ಸವಾರರ ಜೀವಕ್ಕೆ ಯಮ ಆಗುತ್ತಿದ್ದಾರೆ. ಮತ್ತೊಂದೆಡೆ ಹೆದ್ದಾರಿ ಕಾಮಗಾರಿಯಿಂದ ರಸ್ತೆಗಳಲ್ಲಿ ಹೊಂಡ, ತೋಡುಗಳು ನಿರ್ಮಾಣ ಆಗಿದ್ದು, ಸುಗಮ ಸಂಚಾರದ ವ್ಯವಸ್ಥೆಯಲ್ಲಿ ಪರಿಶೀಲಿಸಬೇಕಾದ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪ್ರಯಾಣಿಕರು, ಸವಾರರ ಜೀವಕ್ಕೆ ಕುತ್ತು ತಂದಿದೆ. ಇನ್ನಾದರೂ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಧಿಕಾರಿಗಳು ಜಾಗೃತರಾಗಬೇಕೆಂಬ ಅಭಿಪ್ರಾಯ ನಾಗಕರಿಕ ವಲಯದಿಂದ ಕೇಳಿ ಬಂದಿದೆ.