ರಾಷ್ಟೀಯ ಹೆದ್ದಾರಿ 66 ಅಂಬಲಪಾಡಿ ಜಂಕ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಡರ್ ಪಾಸ್ ನಿರ್ಮಾಣದ ಅವಧಿಯೊಳಗೆ ಅಗಲ ಕಿರಿದಾದ ಸರ್ವಿಸ್ ರಸ್ತೆ, ಸಂಪರ್ಕ ರಸ್ತೆ ಹಾಗೂ ಇತರ ಪೂರಕ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಅನುಷ್ಠಾನಗೊಳಿಸಲು ತುರ್ತಾಗಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳಲು ಯೋಜನಾ ನಿರ್ದೇಶಕರು ಮತ್ತು ಅನುಷ್ಠಾನ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮಂಗಳೂರು ಇವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ
ಉಡುಪಿ, ಫೆ.17 : ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಯೋಜನಾ ನಿರ್ದೇಶಕ ಮತ್ತು ಅನುಷ್ಠಾನ ಅಧಿಕಾರಿ, ಮಂಗಳೂರು ಅಬ್ದುಲ್ ಜಾವೆದ್ ಆಜ್ಮಿ ಹಾಗೂ ಇತರ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಜಂಕ್ಷನ್ ನಲ್ಲಿ ನಿರ್ಮಾಣ ಹಂತದಲ್ಲಿರುವ ಅಂಡರ್ ಪಾಸ್ ಕಾಮಗಾರಿಯ ಸ್ಥಳಕ್ಕೆ ಫೆ.16ರಂದು ಸಂಜೆ ಬೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಕಡೆಕಾರು ಅವರ ನೇತೃತ್ವದಲ್ಲಿ ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪ್ರಮುಖರೊಂದಿಗೆ ಕಾಮಗಾರಿಯನ್ನು ವೀಕ್ಷಿಸಿದರು.
ರಾಷ್ಟ್ರೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯು ಅಂಬಲಪಾಡಿ ಜಂಕ್ಷನ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ತುರ್ತಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಜ.30ರಂದು ಸಲ್ಲಿಸಿರುವ ಮನವಿಗೆ ಸ್ಪಂದಿಸಿದ ಸಂಸದ ಕೋಟ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅನುಷ್ಠಾನ ನಿರ್ದೇಶಕರ ಸಹಿತ ಇತರ ಅಧಿಕಾರಿಗಳೊಂದಿಗೆ ಅಂಬಲಪಾಡಿ ಜಂಕ್ಷನ್ ನಲ್ಲಿ ಅಭಿವೃದ್ಧಿ ಪಡಿಸಬೇಕಾದ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮಾಹಿತಿ ಪಡೆದು ಚರ್ಚಿಸಿದರು.
ರಾಷ್ಟೀಯ ಹೆದ್ದಾರಿ 66 ಅಂಬಲಪಾಡಿ ಬಳಕೆದಾರರ ಹಿತ ರಕ್ಷಣಾ ವೇದಿಕೆಯು ಈ ಹಿಂದಿನಿಂದಲೂ ಒತ್ತಾಯಿಸಿಕೊಂಡು ಬಂದಿರುವ ಪ್ರಮುಖ ಬೇಡಿಕೆಗಳಾದ ಅಗಲ ಕಿರಿದಾದ ಸರ್ವಿಸ್ ರಸ್ತೆಯನ್ನು ಕುತ್ಪಾಡಿ ಬಲಾಯಿಪಾದೆಯಿಂದ ಕರಾವಳಿ ಬೈಪಾಸ್ ರಸ್ತೆಯ ವರೆಗೆ ವಿಸ್ತರಿಸಿ ನಿರ್ಮಾಣ ಮಾಡುವುದು, ಅಂಬಲಪಾಡಿ-ಬ್ರಹ್ಮಗಿರಿ ನಗರಸಭೆ ಸಂಪರ್ಕ ರಸ್ತೆಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸುವುದು, ಫೂಟ್ ಪಾತ್ ನಿರ್ಮಾಣ ಸಹಿತ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಸಾರ್ವಜನಿಕರ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಪೂರಕವಾಗಿ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಮುಕ್ತಾಯಗೊಳ್ಳುವ ಮೊದಲು ತುರ್ತಾಗಿ ಕೈಗೊಳ್ಳಲು ವೇದಿಕೆಯ ಸಂಚಾಲಕರ ಸಹಿತ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಹಾಗೂ ಪ್ರಮುಖರು ಸಂಸದರು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು.
ಇದರ ಜೊತೆಗೆ ಅಂಡರ್ ಪಾಸ್ ನ ಮೇಲೆ ಓವರ್ ಪಾಸ್ ನಲ್ಲಿ ಸಂಚರಿಸುವ ಹೆದ್ದಾರಿ ವಾಹನಗಳ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಪೂರಕವಾಗಿ ಉತ್ತರ ಮತ್ತು ದಕ್ಷಿಣದಲ್ಲಿ ಸಮಾನ ಅಂತರದ ವರೆಗೆ ಇಳಿಜಾರು ಹೆದ್ದಾರಿ ನಿರ್ಮಾಣವನ್ನು ಪುನರ್ ಪರಿಶೀಲಿಸಿ ನಿರ್ಮಾಣ ಮಾಡುವಂತೆ ವೇದಿಕೆಯು ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಂಸದರನ್ನು ಒತ್ತಾಯಿಸಿದೆ.
ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಕಡೆಕಾರು ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡಿರುವ ಜಾಗದಲ್ಲಿರುವ ಕಟ್ಟಡಗಳನ್ನು ತೆರವುಗೊಳಿಸಿ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಲು ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ವಿಷಯಾಧಾರಿತ ಒತ್ತಾಯಕ್ಕೆ ಸ್ಪಂದಿಸಿದ ಸಂಸದರು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಯ ಸಭೆಯನ್ನು ಒಂದು ವಾರದೊಳಗೆ ಕರೆದು ಮನವಿಯಲ್ಲಿ ತಿಳಿಸಿರುವ ಎಲ್ಲಾ ವಿಷಯಗಳನ್ನು ಚರ್ಚಿಸಿ ಕ್ರಮ ಕೈಗೊಳ್ಳೋಣ ಎಂದು ಅಧಿಕಾರಿಗಳಿಗೆ ಸಭೆ ಕರೆಯಲು ಸೂಚಿಸಿದರು.
ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ವೇದಿಕೆಯ ಪ್ರತಿನಿಧಿಗಳು ಭಾಗವಹಿಸುವ ಮೊದಲು ವೇದಿಕೆಯ ಸಂಚಾಲಕರು ವೈಯುಕ್ತಿಕ ಹೆಸರಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಕೋರಿರುವ ಎಲ್ಲಾ ದಾಖಲೆಗಳನ್ನು ನೀಡಿ ಪಾರದರ್ಶಕತೆಗೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ಸಂಸದರು ಸೂಚ್ಯವಾಗಿ ತಿಳಿಸಿದರು.
ಸಕಾಲಿಕವಾಗಿ ತೆಗೆದುಕೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಉಪಸ್ಥಿತರಿದ್ದ ವೇದಿಕೆಯ ಸರ್ವ ಸದಸ್ಯರು ಸಂಸದರು ಹಾಗೂ ಒಪ್ಪಿಗೆ ನೀಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಮತ್ತು ಅನುಷ್ಠಾನ ನಿರ್ದೇಶಕರ ಸಹಿತ ಎಲ್ಲಾ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ರಾಷ್ಟೀಯ ಹೆದ್ದಾರಿ 66 ಅಂಬಲಪಾಡಿ ಇದರ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಂಸದರ ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ವೇದಿಕೆಯ ಸಂಚಾಲಕ ಭಾಸ್ಕರ ಶೆಟ್ಟಿ ಕಡೆಕಾರು, ಗೌರವ ತಾಂತ್ರಿಕ ಸಲಹೆಗಾರ ಶಾಂತರಾಜ್ ಐತಾಳ್ ಅಂಬಲಪಾಡಿ, ಕೋಶಾಧಿಕಾರಿ ಮನೋಹರ ಶೆಟ್ಟಿ ಅಂಬಲಪಾಡಿ, ಸಂಪರ್ಕ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಅಂಬಲಪಾಡಿ, ನಗರಸಭೆ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಪೂಜಾರಿ, ನಿಕಟಪೂರ್ವ ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅಂಬಲಪಾಡಿ, ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಪ್ರಮುಖರಾದ ಯೋಗೀಶ್ ಶೆಟ್ಟಿ ಅಂಬಲಪಾಡಿ, ಶಿವಕುಮಾರ್ ಅಂಬಲಪಾಡಿ, ಕೀರ್ತಿ ಶೆಟ್ಟಿ ಅಂಬಲಪಾಡಿ, ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಅಜಿತ್ ಶೆಟ್ಟಿಗಾರ್ ಕಪ್ಪೆಟ್ಟು, ಸುನಿಲ್ ಕುಮಾರ್ ಕಪ್ಪೆಟ್ಟು, ಜಗದೀಶ್ ಆಚಾರ್ಯ ಕಪ್ಪೆಟ್ಟು, ಸೋಮನಾಥ್ ಬಿ.ಕೆ. ಅಂಬಲಪಾಡಿ, ಹರೀಶ್ ಆಚಾರ್ಯ ಅಂಬಲಪಾಡಿ, ಹರೀಶ್ ಪಾಲನ್ ಕಪ್ಪೆಟ್ಟು, ದೀಪಕ್ ಪುತ್ರನ್ ಕಡೆಕಾರು, ರಂಜಿತ್ ಶೆಟ್ಟಿ ಅಂಬಲಪಾಡಿ, ಸಂದೇಶ್ ಉಚ್ಚಿಲ್, ಲಕ್ಷ್ಮಣ ಪೂಜಾರಿ, ಅಜಿತ್ ಅಂದ್ರಾದೆ, ಕೃಷ್ಣ ಅಂಬಲಪಾಡಿ , ಗಣೇಶ್ ಪೂಜಾರಿ ಕಪ್ಪೆಟ್ಟು, ಲವ ಕುಮಾರ್, ಎಡ್ರಿಚ್ ಅಂದ್ರಾದೆ ಮುಂತಾದವರು ಉಪಸ್ಥಿತರಿದ್ದರು.

