ಬಿಹಾರದ ಗಯಾ ಜಿಲ್ಲೆಯ ಮಾಜಿ ವಾಯುಪಡೆಯ ಸಿಬ್ಬಂದಿಯೊಬ್ಬರು ತಮ್ಮ ಕುಟುಂಬದಲ್ಲಿ ತನ್ನನ್ನು ಎಷ್ಟು ಜನರು ಪ್ರೀತಿಸುತ್ತಾರೆ, ತಾನು ಸತ್ತರೆ ಎಷ್ಟು ಜನರು ದುಃಖಪಡುತ್ತಾರೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಸಾವಿನ ನಾಟಕವಾಡಿ ಅಂತ್ಯಕ್ರಿಯೆಯ ಮೆರವಣಿಯನ್ನೂ ಆಯೋಜಿಸಿದ್ದಂತಹ ವಿಚಿತ್ರ ಘಟನೆಯೊಂದು ನಡೆದಿದೆ.
74 ವರ್ಷದ ಮೋಹನ್ ಲಾಲ್ ತನ್ನದೇ ಸಾವಿನ ಬಗ್ಗೆ ವದಂತಿ ಹರಡಿಸಿ, ನಕಲಿ ಅಂತ್ಯಕ್ರಿಯೆ ಮೆರವಣಿಗೆ ನಡೆಸುವ ಮೂಲಕ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದ್ದಾರೆ. ಈ ಘಟನೆ ಅಕ್ಟೋಬರ್ 11 ರಂದು ಗುರಾರು ಬ್ಲಾಕ್‌ನ ಕೊಂಚಿ ಗ್ರಾಮದಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಮೋಹನ್ ಲಾಲ್ ವಾಯುಪಡೆಯಿಂದ ನಿವೃತ್ತರಾದಾಗಿನಿಂದ ಗ್ರಾಮದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ. ಆ ಗ್ರಾಮದಲ್ಲಿ ಸರಿಯಾದ ಸ್ಮಶಾನ ಇರಲಿಲ್ಲ. ಮಳೆಗಾಲದಲ್ಲಿ ಹತ್ತಿರದ ನದಿ ತುಂಬಿ ಹರಿಯುತ್ತಿದ್ದರಿಂದ ಗ್ರಾಮಸ್ಥರು ಅಂತ್ಯಕ್ರಿಯೆಗಳನ್ನು ನಡೆಸಲು ತುಂಬಾ ಕಷ್ಟಪಡುತ್ತಿದ್ದರು. ಈ ಸಮಸ್ಯೆಯನ್ನು ಗಮನಿಸಿದ ಮೋಹನ್ ಲಾಲ್ ಸುಮಾರು 6 ಲಕ್ಷ ರೂಪಾಯಿಗಳ ತಮ್ಮ ಸ್ವಂತ ಖರ್ಚಿನಲ್ಲಿ ಮುಕ್ತಿಧಾಮವನ್ನು ನಿರ್ಮಿಸಿದರು. ಈ ಮುಕ್ತಿಧಾಮ ಮೃತ ದೇಹಗಳಿಗೆ ಶೆಡ್, ಗ್ರಾಮಸ್ಥರಿಗೆ ನೆರಳು, ವೇದಿಕೆ ಮತ್ತು ಕುಡಿಯುವ ನೀರಿಗಾಗಿ ಹ್ಯಾಂಡ್ ಪಂಪ್‌ನಂತಹ ಸೌಲಭ್ಯಗಳನ್ನು ಹೊಂದಿದೆ.
ಈ ಮುಕ್ತಿಧಾಮವನ್ನು ಪ್ರಚಾರ ಮಾಡಲು ಮತ್ತು ಜನರು ತನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂದು ತಿಳಿಯಲು ಮೋಹನ್ ಲಾಲ್ ತನ್ನದೇ ಸಾವಿನ ನಾಟಕವಾಡಿದರು. ತನ್ನ ಸಾವಿನ ವದಂತಿಯನ್ನು ಇಡೀ ಗ್ರಾಮದಲ್ಲಿ ಹರಡಿದರು. ಶವದಂತೆ ಮಲಗಿ, ತನ್ನ ಮೇಲೆ ಹೂವಿನ ಹಾರಗಳನ್ನೂ ಹಾಕಿಸಿ ಅಂತ್ಯಕ್ರಿಯೆಯ ಮೆರವಣಿಗೆಯನ್ನೂ ನಡೆಸಿದರು. ಮೆರವಣಿಗೆಯನ್ನು ಸೆಳೆಯಲು ಬ್ಯಾಂಡ್‌ಗಳನ್ನೂ ಆಯೋಜಿಸಿದ್ದರು. ವಿಚಾರ ತಿಳಿದು ನೂರಾರು ಗ್ರಾಮಸ್ಥರು ಮೋಹನ್ ಲಾಲ್ ಅವರ ಅಂತಿಮ ದರ್ಶನಕ್ಕೆ ಹರಿದು ಬಂದಿದ್ದರು. ಸ್ಥಳದಲ್ಲಿ ದುಃಖಕರ ವಾತಾವರಣವೂ ನಿರ್ಮಾಣವಾಗಿತ್ತು.
ಆದರೆ ಮೆರವಣಿಗೆ ಮುಕ್ತಿಧಾಮ ತಲುಪಿದಂತೆ ಮೋಹನ್ ಲಾಲ್ ಇದ್ದಕ್ಕಿದ್ದಂತೆ ಎದ್ದು ನಿಂತು ಎಲ್ಲರನ್ನು ಬೆಚ್ಚಿಬೀಳಿಸಿದ್ದಾರೆ. ನಂತರ ತಾವು ಈ ರೀತಿ ನಾಟಕವಾಡಿದ ಉದ್ದೇಶವನ್ನು ಜನರಿಗೆ ವಿವರಿಸಿದರು. ಬಳಿಕ ಸಾಂಕೇತಿಕ ಪ್ರತಿಕೃತಿಯನ್ನು ಸುಟ್ಟು ಸಾಮೂಹಿಕ ಔತಣಕೂಟವನ್ನು ಆಯೋಜಿಸಲಾಯಿತು. ಈ ಮೂಲಕ ತಾವು ನಿರ್ಮಿಸಿದ ಮುಕ್ತಿಧಾಮದ ಉದ್ಘಾಟನೆಯೂ ನೆರವೇರಿತು.