ಉಡುಪಿ: ಸಂಸತ ಮತ್ತು ಕನ್ನಡ ಸಾಹಿತ್ಯ ಪರಂಪರೆಯ ಅದ್ಭುತ ಕಲೆ, ಮನಸ್ಸಿನ ಏಕಾಗ್ರತೆಗೆ ಆದ್ಯತೆ ನೀಡುವ ಅಪೂರ್ವವಾದ ಅಷ್ಟಾವಧಾನ ಭಾನುವಾರ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಮಹಾಮಹೋಪಾಧ್ಯಾಯ ಶತಾವಧಾನಿ ಡಾ.ರಾಮನಾಥ ಆಚಾರ್ಯ ಅಷ್ಟಾವಧಾನ ನಡೆಸಿಕೊಟ್ಟರು.
ಸುಮಾರು 2 ಗಂಟೆಗಳ ಕಾಲಾವಧಿಯಲ್ಲಿ 8 ವಿಭಾಗಗಳ ಎಲ್ಲಾ ಪ್ರಕಾರಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿ ಅತ್ಯಲ್ಪ ಕಾಲದಲ್ಲಿ ಕಠಿನವಾದ ಸವಾಲುಗಳನ್ನು ಲೀಲಾಜಾಲವಾಗಿ ನೆರವೇರಿಸಿದರು. ಜೊತೆಗೆ ವೇದಪೂರಣ ಎಂಬ ಹೊಸ ಪ್ರಕಾರದಿಂದ ಅವಧಾನ ನಡೆಸಿ ಐದು ಶ್ಲೋಕಗಳನ್ನು ರಚಿಸಿದರು.ಈ ಸಂದರ್ಭದಲ್ಲಿ ಶಾಸ್ತ್ರೀಯ ವಿಚಾರಗಳು, ತಾತ್ವಿಕ ಸಂಗತಿಗಳು, ಜನತೆಗೆ ಸಂದೇಶಾತ್ಮಕವಾದ ಅನೇಕ ವಿಷಯಗಳು ಪ್ರಸ್ತುತಗೊಂಡಿತು.
ಪೃಚ್ಛಕರಾಗಿ ಭಾಗವಹಿಸಿದ್ದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತಿರ್ಥ ಶ್ರೀಪಾದರು ಪ್ರಶ್ನಪ್ರಹಸನ, ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಗೀತಾಲೋಕನ ಮತ್ತು ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತಿರ್ಥ ಶ್ರೀಪಾದರು ಚಿತ್ರಕವನ ವಿಭಾಗದ ಪೃಚ್ಛಕರಾಗಿದ್ದರು.
ವಿರುದ್ಧವರ್ಣ ವಿಭಾಗದಲ್ಲಿ ಡಾ.ಮಧುಸೂದನ ಭಟ್, ಪದಪ್ರಧಾನ ವಿಭಾಗದಲ್ಲಿ ವಿದ್ವಾನ್ ಮುರಾರಿ ತಂತ್ರಿ ಬೈಲೂರು, ಸಮಸ್ಯಾವಸಾನ ವಿಭಾಗದಲ್ಲಿ ವಿದ್ವಾನ್ ಕೃಷ್ಣ ನೂರಿತ್ತಾಯ ಧರ್ಮಸ್ಥಳ, ವೇದಪೂರಣ ವಿಭಾಗದಲ್ಲಿ ಅಡ್ವೆ ಲಕ್ಷ್ಮೀಶ ಭಟ್ ಭಾಗವಹಿಸಿದ್ದರು.
ಡಾ. ಷಣ್ಮುಖ ಹೆಬ್ಬಾರ್ ನಿರ್ವಹಿಸಿದರು. ಮಹಿತೋಷ ಆಚಾರ್ಯ ವಂದಿಸಿದರು. ಪ್ರಮೋದಾಚಾರ್ಯ ಮತ್ತು ರಮೇಶ ಭಟ್ ಸಹಕರಿಸಿದರು. ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ವಿದ್ವಾನ್ ಪ್ರಸನ್ನಾಚಾರ್ಯ ಸಹಕರಿಸಿದರು. ಸಭಾಂಗಣದಲ್ಲಿ ಜನತೆ ಕಿಕ್ಕಿರಿದು ನೆರೆದಿರುವುದು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿ ಎಂದೆನಿಸಿತು.

