ಬಂಟ್ವಾಳ : ಮೆದುಳಿನ ರಕ್ತ ಸ್ರಾವದಿಂದ ಮೃತಪಟ್ಟ ಅವಿವಾಹಿತ ಯುತಿಯೋರ್ವಳ ಅಂಗಾಂಗವನ್ನು ದೊಡ್ಡ ಮನಸ್ಸು ದಾನ ಮಾಡಿದ ತಾಯಿ ಹೃದಯದ ಶ್ರೀಮಂತಿಕೆಗೆ ತಲೆಬಾಗುವಂತೆ ಮಾಡಿದೆ .
ಸುಳ್ಯದ ರಥಬೀದಿ ನಿವಾಸಿಯಾಗಿದ್ದ ಮಮತಾ ಶೆಟ್ಟಿ ಎಂಬವವರ ಪುತ್ರಿ ಸಿಂಧು ಶೆಟ್ಟಿ ಮೃತಪಟ್ಟ ಯುವತಿ. ಸಿಂಧು ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ಡಿ.16 ರಂದು ಬ್ಯಾಂಕ್ ನಿಂದ ಮನೆಗೆ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ತಲೆನೋವು ಬಂದು ಸ್ಥಳೀಯ ಆಸ್ಪತ್ರೆಗೆ ಹೋಗಿ ಪರೀಕ್ಷೆ ನಡೆಸಿದರು. ಅಲ್ಲಿಂದ ಬಳಿಕ ಸುಳ್ಯದ ಕೆ.ವಿ.ಜಿ., ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಯಿತು. ಮೆದುಳಿನ ರಕ್ತಸ್ರಾವ ಉಂಟಾದ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆ ಬಳಿಕ ಒಮ್ಮೆ ಪ್ರಜ್ಞೆ ಬಂದಿತ್ತಾದರೂ ಬಳಿಕ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಕೋಮಾಗೆ ಜಾರಿದ್ದರು. ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡರೂ, ಯಂತ್ರಗಳ ಸಹಾಯದಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಲಿವರ್, ಕಣ್ಣುಗಳು ಮುಂತಾದ ಪ್ರಮುಖ ಅಂಗಗಳನ್ನು ಉಳಿಸಬಹುದಾಗಿದೆ. ಈ ಅಂಗಗಳನ್ನು ದಾನ ಮಾಡುವುದರಿಂದ ಇತರರಿಗೆ ಜೀವದಾನ ಮಾಡಿದಂತಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಯಿ ಮಮತಾ ಅವರು ಮನೆಯವರೊಂದಿಗೆ ಚರ್ಚಿಸಿ ಅಂಗಾಂಗಗಳನ್ನು ದಾನಮಾಡುವ ನಿರ್ಧಾರ ಮಾಡಿದರು.
ಮೆದುಳು ನಿಷ್ಕ್ರಿಯಗೊಂಡಿದ್ದ ಕಾರಣ ಆಕೆಯ ಅಂಗಾಂಗಗಳನ್ನು ದಾನ ಮಾಡಲು ಮನೆಯವರು ನಿರ್ಧರಿಸಿದ ಹಿನ್ನೆಲೆಯಲ್ಲಿ ಮಂಗಳೂರು ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಮೈಸೂರಿನ ಅಪೋಲೋ ಹಾಗೂ ಮಂಗಳೂರು ಎ.ಜೆ, ಕೆ.ಎಂ.ಸಿ, ಹಾಗೂ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ರವಾನಿಸಿದರು. ಈ ಪೈಕಿ ಮೈಸೂರಿಗೆ ಅಂಗಾಂಗವನ್ನು ಸುಮಾರು 3 ಗಂಟೆ ವೇಳೆಗೆ ಆಂಬುಲೆನ್ಸ್ ಮೂಲಕ ಸಾಗಿಸಿದ್ದಾರೆ. ಅಂಗಾಂಗ ದಾನ ಮಾಡಿದ ಬಳಿಕ ಸಿಂಧು ಅವರ ಮೃತದೇಹವನ್ನು ಸಿದ್ದಕಟ್ಟೆಯ ಮಾವ ರಾಜೇಶ್ ಎಂಬವರ ಮನೆಗೆ ಕರೆತರಲಾಯಿತು. ಅಲ್ಲಿ ವಿಧಿವಿಧಾನಗಳನ್ನು ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

