ಮೂಡುಬಿದಿರೆ: ತುಳುನಾಡಿನ ಸಂಸ್ಕೃತಿ, ಪರಂಪರೆಯನ್ನು ನೆನಪಿಸುವಂತಹ ಕೆಲಸಗಳಿಗಾಗಿ ,ಆಟಿಡೊಂಜಿ ದಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರಕೃತಿಯೊಂದಿಗೆ ಆರೋಗ್ಯಕ್ಕೆ ಸಹಕಾರಿಯಾದ ಆಹಾರ ಪದ್ಧತಿ, ಜೀವನಶೈಲಿಯನ್ನು ಆಟಿ ತಿಂಗಳು ಕಲಿಸಿಕೊಡುತ್ತದೆ. ಬದಲಾದ ಕಾಲಘಟ್ಟದಲ್ಲಿ ತುಳುನಾಡಿನ ಮೂಲ ಆಚರಣೆಗಳು ಮರೆಯಾಗುತ್ತಿದೆ. ನಮ್ಮ ಹಿರಿಯರು ಅನುಸರಿಸಿದ ಶ್ರೇಷ್ಠ ಪರಂಪರೆಯ ತಿರುಳನ್ನು ಅರಿತು, ಆಚರಣೆಗಳಿಗೆ ಅಪಚಾರವಾಗದ ರೀತಿಯಲ್ಲಿ ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ಕಲಿಸಿಕೊಡಬೇಕಾಗಿದೆ ಎಂದು ಲೇಖಕಿ ರೇಣುಕಾ ಕಣಿಯೂರು ಹೇಳಿದರು.
ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಮೂಡುಬಿದಿರೆ ಆಶ್ರಯದಲ್ಲಿ ನಾರಾಯಣ ಗುರು ಸೇವಾದಳ ಹಾಗೂ ನಾರಾಯಣ ಗುರು ಮಹಿಳಾ ಘಟಕದ ಆಶ್ರಯದಲ್ಲಿ ಭಾನುವಾರ ಸಂಘದ ಕಾಮಧೇನು ಸಭಾಭವನದಲ್ಲಿ ನಡೆದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಬೆಂಗಳೂರು ಲಿಟ್ಲ್ ಲಿಲ್ಲಿಸ್ ಶಾಲೆಯ ಶಿಕ್ಷಕಿ ದೀಪ್ತಿ ಆನಂದ ಅಮೀನ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಸುರೇಶ್ ಕೆ.ಪೂಜಾರಿ ಅಧ್ಯಕ್ಷತೆವಹಿಸಿ, ತುಳು ಆಚರಣೆಯ ಬಗ್ಗೆ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಕಲಿಸಿಕೊಡಬೇಕಾಗಿದೆ. ತುಳುವಿಗೆ ಮಾನ್ಯತೆ ಸಿಗಲು ನಡೆಯುವ ಗಣತಿಯ ಸಂದರ್ಭದಲ್ಲಿ ನಾವು ತಪ್ಪು ಮಾಹಿತಿ ನೀಡಿದರೆ, ತುಳು ಹೋರಾಟ, ಭಾಷೆ, ಸಂಸ್ಕೃತಿಗೆ ಹಿನ್ನಡೆಯಾಗುತ್ತದೆ ಎಂದರು.
ಪ್ರಸೂತಿ ತಜ್ಞೆ ಡಾ. ರಶ್ಮಿ ಮುರಳಿಕೃಷ್ಣ, ಆಳ್ವಾಸ್ ಹೆಲ್ತ್ ಸೆಂಟರಿನ ಅರಿವಳಿಕೆ ತಜ್ಞೆ ಡಾ.ಸ್ವರ್ಣರೇಖಾ ಆರ್.ವಿ, ಉದ್ಯಮಿ ಜಯಕುಮಾರ್ ಪೂಜಾರಿ,ಸಂಘದ ಮಾಜಿ ಉಪಾಧ್ಯಕ್ಷ ನವೀನ್ಚಂದ್ರ ಕರ್ಕೇರ ಮುಖ್ಯ ಅತಿಥಿಯಾಗಿದ್ದರು. ಸೇವಾದಳದ ಅಧ್ಯಕ್ಷ ದಿನೇಶ್ ಪೂಜಾರಿ, ಮಾಜಿ ಅಧ್ಯಕ್ಷ ಭವಿಷ್ಯತ್ ಕೋಟ್ಯಾನ್, ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್ ವೇದಿಕೆಯಲ್ಲಿದ್ದರು. ಅಮೃತ ಮಹೋತ್ಸವ ಸಮಿತಿಯ ಸಂಚಾಲಕರುಗಳಾದ ಡಾ. ರಮೇಶ್, ಡಾ. ಮುರಳೀಕೃಷ್ಣ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ, ಗೌರವ ಸಲಹೆಗಾರರಾದ ಭಾನುಮತಿ ಶೀನಪ್ಪ, ನಿವೃತ್ತ ಉಪ ಆಯುಕ್ತ ಅಚ್ಚುತ ಪಿ., ಪ್ರಮುಖರಾದ ಪಿ. ಕೆ. ರಾಜು ಪೂಜಾರಿ, ಪದ್ಮಯ್ಯ ಸುವರ್ಣ, ಸುರೇಶ್ ಕೋಟ್ಯಾನ್, ಮಾಲತಿ ಗೋಪಿನಾಥ್, ರಾಜೀವಿ ಅಂಚನ್, ರತ್ನಾವತಿ, ಜಯಶೀಲ, ವಿನುತಾ ಆನಂದ್, ಹೇಮಾ ಸನಿಲ್ ಉಪಸ್ಥಿತರಿದ್ದರು.
ಮಹಿಳಾ ಘಟಕದ ಗೌರವಾಧ್ಯಕ್ಷೆ ಉಷಾ ಮಧುಕರ್ ಸ್ವಾಗತಿಸಿದರು. ಸದಸ್ಯೆ ಶೃತಿ ಶ್ರೀಧರ್ ವಂದಿಸಿದರು. ಶ್ರೀರಾಜ್ ಸನಿಲ್ ಮತ್ತು ಶಿವಾನಿ ನಿರೂಪಿಸಿದರು.

ಸಾಂಸ್ಕೃತಿಕ ಸ್ಪರ್ಧೆ: ಅಮೃತ ಮಹೋತ್ಸವದ ಪ್ರಯುಕ್ತ ಮೂಡುಬಿದಿರೆ ವ್ಯಾಪ್ತಿಯ ವಿವಿಧ ಬಿಲ್ಲವ ಸಂಘಗಳ ಆಹ್ವಾನಿತ ತಂಡಗಳಿAದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಯಲ್ಲಿ ನಾರಾಯಣ ಗುರು ಮಹಿಳಾ ಘಟಕ ಮೂಡುಬಿದಿರೆ, `ಎ’ ತಂಡ ಪ್ರಥಮ, ನಾರಾಯಣ ಗುರು ಮಹಿಳಾ ಘಟಕ ಮೂಡುಬಿದಿರೆ ‘ಬಿ’ ತಂಡ ದ್ವಿತೀಯ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಶಿರ್ತಾಡಿ-‘ಬಿ’ ತಂಡ ತೃತೀಯ ಬಹುಮಾನ ಪಡೆದವು. ಧರ್ಮಸ್ಥಳ ಮೇಳದ ಪ್ರಖ್ಯಾತ ವೇಷಧಾರಿ ಚಂದ್ರಶೇಖರ ಪೂಜಾರಿ, ಮಿತ್ತಲಾಡಿ ಬರ್ಕೆ ಗುರಿಕಾರ ಈಶ್ವರ ಪೂಜಾರಿ ಮತ್ತು ಪಿ.ಡಿ.ಒ ಕೃಷ್ಣಪ್ಪಪೂಜಾರಿ ವಿಜೇತರಿಗೆ ಬಹುಮಾನ ವಿತರಿಸಿದರು.