ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮಂಡಲ ಯುವ ವೇದಿಕೆ ಮಹಿಳಾ ಘಟಕದ ವತಿಯಿಂದ ಆಟಿದ ಗೇನ ವಿಚಾರ ಸಂಕಿರಣ ಹಾಗೂ ‘ಮರಿಯಲದ ತುಳುನಾಡ್’ ಎಂಬ ವಿಷಯದ ಬಗ್ಗೆ ಚಿತ್ರಕಲಾ ಸ್ಪರ್ಧೆ ಆ.03 ರಂದು ಬೆಳಿಗ್ಗೆ ಮಂಗಳೂರಿನ ತುಳು ಭವನದಲ್ಲಿ ನಡೆಯಲಿದೆ.
ಆದಿತ್ಯವಾರದಂದು ಬೆಳಿಗ್ಗೆ 9.30 ಕ್ಕೆ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 11.00 ಗಂಟೆಗೆ ಆಟಿದ ಗೇನ ವಿಚಾರ ಸಂಕಿರಣ ನಡೆಯಲಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಎ.ಜೆ. ಆಸ್ಪತ್ರೆಯ ಫಿಸಿಯೋಲಾಜಿ ವಿಭಾಗದ ವೈದ್ಯರಾದ ಡಾ.ಕಲ್ಪನಾ ಅಶ್ಫಕ್ ಅವರು ನಡೆಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಡಾ.ಶಿವರಾಮ ಕಾರಂತ ಟ್ರಸ್ಟ್ ನ ಸದಸ್ಯರು ಹಾಗೂ ಅಕಾಡೆಮಿಯ ಮಾಜಿ ಸದಸ್ಯರಾದ ಶ್ರೀಮತಿ ಅತ್ರಾಡಿ ಅಮೃತ ಶೆಟ್ಟಿ ಇವರು ಆಟಿ ತಿಂಗಳಿನ ಬಗ್ಗೆ ವಿಚಾರ ಮಂಡನೆ ನಡೆಸಲಿದ್ದಾರೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಬಿ.ಎ. ಖಾದರ್ ಷಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಒಂದನೇ ತರಗತಿಯಿಂದ 10ನೇ ತರಗತಿ ತನಕದ ವಿದ್ಯಾರ್ಥಿಗಳಿಗೆ ನಾಲ್ಕು ವಿಭಾಗಗಳಲ್ಲಿ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಡ್ರಾಯಿಂಗ್ ಹಾಳೆಯನ್ನು ಸ್ಥಳದಲ್ಲಿ ನೀಡಲಾಗುವುದು, ಉಳಿದ ಪರಿಕರಗಳನ್ನು ವಿದ್ಯಾರ್ಥಿಗಳು ತರಬೇಕು, ವಿದ್ಯಾರ್ಥಿಗಳು ಬೆಳಿಗ್ಗೆ 9:00 ಗಂಟೆಗೆ ಹಾಜರಿರಬೇಕು ಎಂದು ತುಳು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.