ಬ್ರಹ್ಮಾವರ: ಗ್ರಾಮಾಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ (ರುಡ್ ಸೆಟ್) ಸಂಸ್ಥೆ ಬ್ರಹ್ಮಾವರ ಇವರ ಆಶ್ರಯದಲ್ಲಿ ಪಿಎಂಈಜಿಪಿ ಹಾಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಹಾಗೂ ದುರಸ್ಥಿ ಮತ್ತು ಸೇವೆ ತರಬೇತಿಯ ಉದ್ಘಾಟನಾ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಸುಜಾತಾ ಅಂದ್ರಾದೇ, ಮಾಲಕರು ಮಯೂರ ಫೋಟೋಗ್ರಫಿ ಸ್ಟುಡಿಯೋ, ಬ್ರಹ್ಮಾವರ, ಛಾಯಾಕಿರಣ ರಾಜ್ಯ ಪ್ರಶಸ್ತಿ ಪುರಸ್ಕೃತರು, ಗ್ರಾಮೀಣ ಮಟ್ಟದಲ್ಲಿ ಮೊದಲ ಮಹಿಳಾ ಫೋಟೋಗ್ರಫರ್ ಪ್ರಶಸ್ತಿ ಗೆ ಭಾಜನರು.
ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮುಖಾಂತರ ಉದ್ಘಾಟಿಸಿ, ಶಿಬಿರಾರ್ಥಿಗಳನ್ನುಡ್ಡೇಶಿಸಿ ಮಾತನಾಡಿ, ತಾನು ಶಿಬಿರಾರ್ಥಿಯಾಗಿದ್ದಾಗ ತರಬೇತಿಯ ಬಗೆಗೆ ಅವರಿಗಿದ್ದ ಕಲ್ಪನೆ ಹಾಗೂ ತರಬೇತಿಯ ಅವಧಿಯಲ್ಲಿ ಅವರು ಪಡೆದುಕೊಂಡ ಅನುಭವವನ್ನು ಹಂಚಿಕೊಂಡರು. ಜೊತೆಗೆ ಅವರು ಪಟ್ಟಂತಹ ಕಠಿಣ ಪರಿಶ್ರಮ, ಕೆಲಸದ ಮೇಲೆ ಅವರಿಗಿದ್ದ ಆಸಕ್ತಿ, ಆತ್ಮವಿಶ್ವಾಸ, ಶ್ರದ್ಧೆಯಿಂದಾಗಿ ಇವತ್ತು ಯಶಸ್ಸಿನ ಹಂತವನ್ನು ತಲುಪಿದ್ದೇನೆ ಎಂದರು. ಫೋಟೋಗ್ರಫಿ ಕ್ಷೇತ್ರದಲ್ಲಿ ಮಹಿಳಾ ಉದ್ಯಮಿಯಾಗಿ ಹೊರಬಂದಾಗ, ತಾನು ಎದುರಿಸಿದ ಟೀಕೆಗಳನ್ನು ಮೆಟ್ಟಿ ನಿಂತು ಹೇಗೆ ಆತ್ಮಸ್ಥೈರ್ಯದಿಂದ ಮುಂದೆ ಬಂದಿದ್ದೇನೆಂದು ಪ್ರೇರಣೆಯ ಮಾತುಗಳನ್ನಾಡಿದರು. ತರಬೇತಿಯ ಅವಧಿಯಲ್ಲಿ ಸರಿ ತಪ್ಪುಗಳ ಅರಿವು ಸಿಗುತ್ತದೆ. ಜೊತೆಗೆ ಗುಣಮಟ್ಟದ ಕುರಿತು ಕಾಳಜಿ ಇರಲಿ ಎಂದು ಹೇಳಿ ಶಿಬಿರಾರ್ಥಿಗಳಿಗೆ ಶುಭಹಾರೈಸಿದರು.
ಅದೇ ರೀತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ರುಡ್ ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ. ಬೊಮ್ಮಯ್ಯ ಎಂ ಮಾತನಾಡಿ ತರಬೇತಿಯನ್ನು ಕೇವಲ ಪ್ರಮಾಣ ಪತ್ರ ಹಾಗೂ ಸಬ್ಸಿಡಿ ಲೋನ್ ಗಳ ಉದ್ದೇಶಕ್ಕೋಸ್ಕರ ಪಡೆದುಕೊಳ್ಳುವ ಬದಲು ತಮ್ಮ ವೈಯಕ್ತಿಕ ಬೆಳವಣಿಗೆಗೆ ಹಾಗೂ ಉದ್ಯಮದ ಬೆಳವಣಿಗೆಗೊಸ್ಕರ ಪಡೆಯಿರಿ. ಸರಕಾರದ ಯೋಜನೆಗಳನ್ನು ಉತ್ತಮವಾಗಿ ಪಡೆದುಕೊಂಡು, ಸಂಸ್ಥೆ ಹಾಗೂ ಬ್ಯಾಂಕಿನೊಂದಿಗೂ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಿ , ಯಶಸ್ವಿ ಉದ್ಯಮಿಗಳಾಗಿ ಎಂದರು.

ಈ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಮ್ಮ ಪರಿಚಯವನ್ನು ಮಾಡಿಕೊಂಡರು. ಗುರುರಾಜ್, ಅತಿಥಿ ಉಪನ್ಯಾಸಕರು, ಸಿಸಿಟಿವಿ ಅಳವಡಿಕೆ ಹಾಗೂ ದುರಸ್ಥಿ ತರಬೇತಿ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕರು ಚೈತ್ರ. ಕೆ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿದರು, ಹಿರಿಯ ಉಪನ್ಯಾಸಕರಾದ ಶ್ರೀ. ಸಂತೋಷ್ ವಂದಿಸಿದರು.

