ವರದಿ :ಮಂದಾರ ರಾಜೇಶ್ ಭಟ್ ತುಳುನಾಡು ವಾರ್ತೆ
ತುಳುನಾಡು ÷ .ಕ ಜಿಲ್ಲಾ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತು ವ್ಯಾಪ್ತಿಗೆ ಒಳಪಟ್ಟಿರುವ ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ ಡಿ.28 ರಂದು ಕೊಯ್ಯೂರಿನಲ್ಲಿ ನಡೆಯಲಿರುವ 19 ನೇಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯಕ್ಷಗಾನ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟಕ ಬಿ ಭುಜಬಲಿ ಧರ್ಮಸ್ಥಳ ಆಯ್ಕೆಯಾಗಿದ್ದಾರೆ.
ಸಮ್ಮೇಳನ ಸಂಯೋಜನಾ ಸಮಿತಿ ಮುಖ್ಯಸ್ಥರ ಸಮ್ಮುಖ ಡಿ.16 ರಂದು ನಡೆದ ಸಮಾಲೋಚನೆಯ ಬಳಿಕ ಕಸಾಪ ತಾ. ಅಧ್ಯಕ್ಷ ಡಿ ಯದುಪತಿ ಗೌಡ ಸಮ್ಮೇಳನಾಧ್ಯಕ್ಷರ ಹೆಸರು ಘೋಷಿಸಿದರು.
ಯಕ್ಷಗಾನ ಕಲಾ ಸಂಘಟನೆ, ಸಾಂಸ್ಕೃತಿಕ, ಸಾಮಾಜಿಕ, ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಅವರನ್ನು ಆಯ್ಕೆಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಿ ಪದ್ಮನಾಭ ಶೆಟ್ಟಿ ಮತ್ತು ಅನಂತಮತಿ ದಂಪತಿಯ ಪುತ್ರನಾಗಿ ಜನಿಸಿದ ಭುಜಬಲಿ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪಾರುಪತ್ಯಗಾರ, ಜಮಾ ಉಗ್ರಾಣದಲ್ಲಿ ಮುತ್ಸದ್ಧಿಯಾಗಿ ವಿವಿಧ ಸ್ಥರಗಳಲ್ಲಿ
48 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಅನುಭವಿಯಾಗಿದ್ದು , ಕಲಾಪ್ರೇಮಿಯಾಗಿ ಕಲಾವಿದರನ್ನು ಸಂಘಟಿಸಿ ಯಕ್ಷಗಾನ ಪ್ರಸಂಗ, ಜಿನಕಥೆ, ಹರಿಕಥೆ, ತಾಳಮದ್ದಳೆ,ಭಕ್ತಿ ಗೀತೆಗಳು, ಪ್ರವಚನ, ಕಾವ್ಯ ವಾಚನ, ರಾಮಾಯಣ, ಮಹಾಭಾರತ, ಜೈನ ಧರ್ಮ ಮತ್ತು ಇತರ ಧರ್ಮಗಳ ಕುರಿತು ಹತ್ತು ಹಲವು ವಿವಿಧ ಮಾಧ್ಯಮ ಧ್ವನಿ ಮುದ್ರಿಕೆಗಳ ಮೂಲಕ 100 ಕ್ಕೂ ಹೆಚ್ಚು ಧ್ವನಿ ಸುರುಳಿಗಳನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಾಹಿತ್ಯ ಸಮ್ಮೇಳನಗಳ ಸ್ವಾಗತ ಸಮಿತಿಯ ಸದಸ್ಯರಾಗಿ, 2009 ರಲ್ಲಿ ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ‘ತುಳುಗ್ರಾಮ’ದ ನಿರ್ವಹಣೆಯಲ್ಲಿ ಉತ್ತಮ ತಂಡದೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಭಗವಾನ್ ಶ್ರೀ ಬಹುಬಲಿ ಮಹಾಮಸ್ತಕಾಭಿಷೇಕ, ಪಂಚಕಲ್ಯಾಣ, ಸಮವಸರಣ ಪೂಜೆ, ಮಹಾ ಧರ್ಮನಡಾವಳಿ, ಧಾಮ ಸಂಪ್ರೋಕ್ಷಣೆ, ಮಂಜುನಾಥ ಸ್ವಾಮಿಯ ಬ್ರಹ್ಮಕಲಶೋತ್ಸವ ಇತ್ಯಾಧಿಗಳಲ್ಲಿ ಸಮಗ್ರವಾಗಿ ತೊಡಗಿಸಿಕೊಂಡು ಅನುಭವ ಹೊಂದಿದವರಾಗಿದ್ದು , ಸಾಂಸ್ಕೃತಿಕ ಸಂಘಟನೆ ಹಾಗೂ ‘ಕಲಾಬಳಗ ರಂಗಶಿವ’ ಇದರ ಸದಸ್ಯರಾಗಿ ಸೇವೆ ನೀಡುತ್ತಿದ್ದಾರೆ. ಸಹಕಾರಿ ಸಂಘದ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಭಾರತೀಯ ಜೈನ್‌ಮಿಲನ್ ಅಧ್ಯಕ್ಷರಾಗಿ, ಕಸಾಪ ರಾಜ್ಯ ಸಮಿತಿ ಆಜೀವ ಸದಸ್ಯರಾಗಿ, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ (ಅಲ್ಪ ಸಂಖ್ಯಾತ ಆಯೋಗ) ಅನುಷ್ಢಾನ ಜಿಲ್ಲಾ ಸ್ಥಾಯಿ ಸಮಿತಿಯ ನಾಮನಿರ್ದೇಶನ ಸದಸ್ಯರಾಗಿ, ಅಂತಾರಾಷ್ಟ್ರೀಯ ಸೇವಾ ಸಂಸ್ಥೆಗಳಾದ ಜೆಸಿ, ರೋಟರಿ ಮತ್ತು ಲಯನ್ಸ್ ಕ್ಲಬ್ ಗಳ ಮೂಲಕವೂ ಅನೇಕ ಜನಪರ ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸತೀಶ್ ಶೆಟ್ಟಿ ಪಟ್ಲ ನೇತೃತ್ವದ ಪಟ್ಲ ಫೌಂಡೇಶನ್ ಇದರ ಟ್ರಸ್ಟಿಯಾಗಿಯೂ ಪಾಲ್ಗೊಳ್ಳುವಿಕೆಯ ಮೂಲಕ ಸಂಸ್ಕೃತಿ ಮತ್ತು ಸಾಹಿತ್ಯ ಪೂರಕ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಯಕ್ಷಗಾನ ಕಲಾ ಸಂಘಟಕರಿಗೆ ಹಾಗೂ ಕಲಾವಿದರಿಂದ ನೆರವು ಹಾಗೂ ಪ್ರೋತ್ಸಾಹ ನೀಡುತ್ತಾ ಕಲಾ ಆಶ್ರಯದಾತರೂ ಆಗಿದ್ದಾರೆ.

