ಶ್ರೀರಾಮನ ಆದರ್ಶ ಬದುಕಿನಲ್ಲಿದೆ: ಮಾಜಿ ಸಚಿವ ರೈ
ಬಂಟ್ವಾಳ:ಬಾಲ್ಯದಿಂದಲೇ ರಾಮೇಶ್ವರ ಕ್ಷೇತ್ರದ ಪರಮ ಭಕ್ತನಾಗಿದ್ದ ನನ್ನ ತಂದೆ-ತಾಯಿ ನೀಡಿದ ಸಂಸ್ಕಾರದAತೆ ನನ್ನ ವೈಯಕ್ತಿಕ ಬದುಕಿನಲ್ಲಿ ಶ್ರೀರಾಮನ ಆದರ್ಶ ಅಳವಡಿಸಿಕೊಂಡಿದ್ದೇನೆಯೇ ವಿನಃ ರಾಜಕೀಯದಲ್ಲಿ ಶ್ರೀರಾಮನ ಹೆಸರು ಬಳಸಿಕೊಂಡಿಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ಬಿ.ಸಿ.ರೋಡಿನಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಮಾಜಿ ಸಚಿವ ಬೆಳ್ಳಿಪಾಡಿ ರಮಾನಾಥ ರೈ ಅಭಿನಂದನಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು. ಎಲ್ಲಾ ಜಾತಿ-ಧರ್ಮಗಳ ಸಹಬಾಳ್ವೆಗೆ ಪೂರಕವಾಗಿ ಸ್ಪಂದಿಸಿ ಎಲರ ಪ್ರೀತಿಗೆ ಪಾತ್ರನಾಗಿ, ದೇವರ ಪ್ರೀತಿಗೂ ಪಾತ್ರನಾಗಲು ಪ್ರಯತ್ನಿಸಿದ್ದೇನೆ ಎಂದರು.
ಎಡನೀರು ಮಠದ ಸಚ್ಚಿದಾನಂದ ಭಾರತೀ ಮಹಾಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ‘ಧಾರ್ಮಿಕ ನೆಲೆಗಟ್ಟಿನಲ್ಲಿ ಸಮಾಜ ಸೇವೆಯೊಂದಿಗೆ ತೊಡಗಿಸಿಕೊಂಡ ಇವರಿಬ್ಬರು ಕೂಡಾ ಜಾತ್ಯಾತೀತ ಮತ್ತು ಪಕ್ಷ್ಷಾತೀತವಾಗಿ ಎಲ್ಲರಿಂದಲೂ ಅಭಿನಂದಿಸಲ್ಪಟ್ಟಿದ್ದಾರೆ’ ಎಂದು ಅವರು ಹೇಳಿದರು.
ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಕೂಡಾ ಸಮಾಜದಲ್ಲಿ ದುಡಿದ ಸಂಪತ್ತಿನಲ್ಲಿ ಸಮಾಜ ಸೇವೆಗೂ ಮೀಸಲಿಟ್ಟಾಗ ಪುಣ್ಯ ಸಂಪಾದನೆಯಾಗುತ್ತದೆ’ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ ಬದಿಗುಡ್ಡೆ ಇವರು ಅಭಿನಂದನಾ ಭಾಷಣ ಮಾಡಿದರು.
ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಡಗಬೆಳ್ಳೂರು ಶ್ರೀ ಕಾವೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಘು ಎಲ್. ಶೆಟ್ಟಿ, ಸಮಿತಿ ಗೌರವಾಧ್ಯಕ್ಷ ಬಿ. ರಘುನಾಥ ಸೋಮಯಾಜಿ, ಕೋಶಾಧಿಕಾರಿ ರಾಮಗಣೇಶ್ ಪ್ರಭು ಕೈಕುಂಜೆ, ಶಿವಪ್ರಸಾದ್ ಅಜಿಲ ಅಳದಂಗಡಿ ಮತ್ತಿತರರು ಇದ್ದರು.
ಇದೇ ವೇಳೆ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಾಯಿತು. ಸಂಪಾದಕ ಪ್ರೊ.ರಾಜಮಣಿ ರಾಮಕುಂಜ ಅನಿಸಿಕೆ ವ್ಯಕ್ತಪಡಿಸಿದರು. ಮಹಾಲಿಂಗ ಭಟ್ ಮತ್ತು ಜಯರಾಮ ಪೂಜಾರಿ ಸನ್ಮಾನ ಪತ್ರ ವಾಚಿಸಿದರು.
ಸಮಿತಿ ಅಧ್ಯಕ್ಷ ಕೈಯ್ಯೂರು ನಾರಾಯಣ ಭಟ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ಕಲಾವಿದ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಸಂಚಾಲಕ ಪ್ರಕಾಶ್ ಕಾರಂತ್ ನರಿಕೊಂಬು, ಸಹ ಸಂಚಾಲಕ ಸುಧಾಕರ ಆಚಾರ್ಯ ಮಾರ್ನಬೈಲು, ಉಪಾಧ್ಯಕ್ಷರಾದ ಸುನೀಲ್ ಬಿ., ಪ್ರವೀಣ್ ಜಕ್ರಿಬೆಟ್ಟು, ವಿಶ್ವನಾಥ ಬೆಳ್ಚಡ ಕೂಡೂರು, ಸ್ವಾಗತ ಸಮಿತಿಯ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಆರ್ಥಿಕ ಸಮಿತಿಯ ಉಮೇಶ್ ನೆಲ್ಲಿಗುಡ್ಡೆ, ಗೌರವ ಸಲಹೆಗಾರರಾದ ಭುವನೇಶ್ ಪಚ್ಚಿನಡ್ಕ, ಕೆರಮೇಶ್ ನಾಯಕ್ ರಾಯಿ ಸಹಕರಿಸಿದರು.

