ಬೈಲೂರು – ಅಮ್ಮನ ನೆರವು ಟ್ರಸ್ಟನಿಂದ ವಿದ್ಯಾರ್ಥಿವೇತನ ವಿತರಣೆ

0
16

ಅಕ್ಷರ ಕ್ರಾಂತಿಯಿಂದ ಸಮಾಜದ ಅಭಿವೃದ್ಧಿ – ವಿ.ಸುನೀಲ್ ಕುಮಾರ್

ಕಾರ್ಕಳ : ಅಮ್ಮನ ನೆರವು ಟ್ರಸ್ಟ್(ರಿ) ಸಂಸ್ಥೆಯಿಂದ ಬೈಲೂರು ಮತ್ತು ಸುತ್ತಮುತ್ತಲ ಶಾಲೆಗಳ ಪ್ರತಿಭಾವಂತ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸುವ ಕಾರ್ಯಕ್ರಮವು ಬೈಲೂರು ಜ್ಯೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಜೂನ್ 26ರಂದು ನಡೆಯಿತು. ಕಾರ್ಕಳದ ಶಾಸಕರಾದ ವಿ. ಸುನೀಲ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.

ಅವರು ಮಾತನಾಡಿ ಅಕ್ಷರ ಕಾಂತಿಯಿಂದ ಸಮಗ್ರ ಸಮಾಜದ ಅಭಿವೃದ್ಧಿ ಆಗುತ್ತದೆ. ಅಮ್ಮನ ನೆರವು ಟ್ರಸ್ಟ್ ಸರಕಾರಿ ಶಾಲೆಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ದೊಡ್ಡ ಮೊತ್ತದ ವಿದ್ಯಾರ್ಥಿ ವೇತನವನ್ನು ನೀಡುವುದರ ಮೂಲಕ ಒಂದು ಉತ್ತಮ ಮೇಲ್ಪಂಕ್ತಿ ಹಾಕಿಕೊಟ್ಟಿದೆ ಎಂದರು. ಟ್ರಸ್ಟನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿಯಂತಹ ಯುವಕರು ಈ ಟ್ರಸ್ಟ್ ಸ್ಥಾಪನೆ ಮಾಡಿದ್ದು ತಾಲೂಕಿನಾದ್ಯಂತ ನೂರಾರು ವಿದ್ಯಾರ್ಥಿಗಳಿಗೆ ಅಂದಾಜು 16 ಲಕ್ಷ ರೂ. ಮೊತ್ತದ ವಿದ್ಯಾರ್ಥಿ ವೇತನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದವರು ಹೇಳಿದರು.

ತಾಲೂಕಿನ ಏಳು ಕೇಂದ್ರಗಳಲ್ಲಿ ಈ ವಿದ್ಯಾರ್ಥಿ ವೇತನ ವಿತರಣೆಯ ಕಾರ್ಯಕ್ರಮಗಳು ನಡೆಯಲಿದ್ದು ಅದರ ಮೊದಲ ಹಂತದ ಕಾರ್ಯಕ್ರಮವು ಬೈಲೂರು ಜೂನಿಯರ್ ಕಾಲೇಜಿನಲ್ಲಿ ನಡೆದಿದೆ. ಒಟ್ಟು 16 ಲಕ್ಷ ರೂ. ಮೊತ್ತದ ವಿದ್ಯಾರ್ಥಿವೇತನ ಈ ವರ್ಷ ವಿತರಣೆ ಆಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ಅವರು ಹೇಳಿದರು.

ಬೈಲೂರಿನಲ್ಲಿ 13 ಪಿಯುಸಿ ವಿದ್ಯಾರ್ಥಿಗಳಿಗೆ ತಲಾ 10,000 ರೂ, 32 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ತಲಾ 5,000 ರೂ. ಮತ್ತು ಒಂದು ಶಾಲೆಗೆ 10,000 ನೆರವು ಈ ಕಾರ್ಯಕ್ರಮದಲ್ಲಿ ಹಸ್ತಾಂತರ ಮಾಡಲಾಯಿತು.

ಕಾರ್ಕಳ ಜ್ಞಾನಸುಧಾ ವಿದ್ಯಾಸಂಸ್ಥೆಗಳ ಸ್ಥಾಪಕರಾದ ಡಾ. ಸುಧಾಕರ್ ಶೆಟ್ಟಿಯವರು ಅಮ್ಮನ ನೆರವು ಟ್ರಸ್ಟಿನಿಂದ ಪಡೆದ ವಿದ್ಯಾರ್ಥಿವೇತನಗಳ ಹಿಂದೆ ಉದಾತ್ತವಾದ ಆಶಯವಿದೆ. ಆದ್ದರಿಂದ ಅದನ್ನು
ಸದುಪಯೋಗ ಪಡಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿ ಶುಭ ಹಾರೈಸಿದರು.

ಉದ್ಯಮಿಗಳಾದ ಚಂದ್ರಶೇಖರ್ ಶೆಟ್ಟಿ (ದಾಮಣ್ಣ), ಬೈಲೂರು ಕೃಷ್ಣರಾಜ್ ಹೆಗ್ಡೆ, ಸುಮಿತ್ ಶೆಟ್ಟಿ ಬೈಲೂರು, ಲಯನ್ಸ್ ಅಧ್ಯಕ್ಷ ಗುತ್ತುಮನೆ ಪ್ರಶಾಂತ್ ಶೆಟ್ಟಿ, ಕ್ಲಾಸ್ ಒನ್ ಗುತ್ತಿಗೆದಾರರಾದ ಪ್ರಸನ್ನ ಶೆಟ್ಟಿ ಬೈಲೂರು, ಉದ್ಯಮಿ ಜಯಪ್ರಕಾಶ್ ಶೆಟ್ಟಿ ಪೂನಾ, ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸ್ಟೀವನ್ ಡಿಸೋಜಾ ಮುಂತಾದವರು ಕಾರ್ಯಕ್ರಮದ ಅತಿಥಿಗಳಾಗಿದ್ದು ಶುಭ ಹಾರೈಸಿದರು.

ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸೀತಾರಾಮ್, ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ನಾಗರಾಜ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶಿಕ್ಷಕ ರಾಜೇಂದ್ರ ಭಟ್ ಕೆ. ಎಲ್ಲರನ್ನೂ ಸ್ವಾಗತ ಮಾಡಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಿವೃತ್ತ ಶಿಕ್ಷಕ ವಸಂತ ಎಂ ಅವರು ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here